ಆರಂಭದಲ್ಲೇ ಕ್ಯಾನ್ಸರ್‌ ಪತ್ತೆ ಮಾಡಿದರೆ ಗುಣಪಡಿಸುವುದು ಸುಲಭ

§ಪ್ರಾರ್ಥಿಸಿ, ಎದುರಿಸಿ, ಜಯಗಳಿಸಿ¬ ಎಂಬ ಮೂರು ಪದಗಳ ಘೋಷ ವಾಕ್ಯವನ್ನು ಅಳವಡಿಸಿಕೊಂಡರೆ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಬಹುದು.

– ಕಲಾವಿದ ಆರ್.ಟಿ. ಅರುಣ್‌ಕುಮಾರ್‌

ದಾವಣಗೆರೆ, ಫೆ. 8 – ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ದೇಶದಲ್ಲಿ ಬಹಳಷ್ಟು ಸಾಧನೆಗಳಾಗಿದ್ದು, ಕ್ಯಾನ್ಸರ್ ರೋಗವನ್ನು ಗುಣಪಡಿಸುವಂತಹ ತಂತ್ರಜ್ಞಾನ ಪ್ರಸ್ತುತ ದಿನಮಾನದಲ್ಲಿ ಲಭ್ಯವಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ್ ಹೇಳಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳ ಕಚೇರಿ, ಜಿಲ್ಲಾ ಎನ್.ಸಿ.ಡಿ. ಕೋಶ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವ ಕ್ಯಾನ್ಸರ್ ದಿನಾಚರಣೆ ಉದ್ಘಾಟಿಸಿ, ಅವರು ಮಾತನಾಡುತ್ತಿದ್ದರು.

ಕ್ಯಾನ್ಸರ್, ಟಿಬಿ, ಏಡ್ಸ್ ಮುಂತಾದವು ಕೊರೊನಾಗಿಂತ ತೀವ್ರವಾಗಿವೆ. ಭಾರತ ಕ್ಯಾನ್ಸರ್ ಕಾಯಿಲೆಗೆ ತುತ್ತಾದವರ ಪಟ್ಟಿಯಲ್ಲಿ ಜಗತ್ತಿನಲ್ಲಿ 5ನೇ ಸ್ಥಾನದಲ್ಲಿದೆ. ತಂಬಾಕು ಸೇವನೆ ಮಾಡುವುದರಿಂದ ಕ್ಯಾನ್ಸರ್ ಕಾಯಿಲೆ ಬರುವ ಸಾಧ್ಯತೆ ಶೇ. 90 ರಷ್ಟಿದೆ ಎಂದವರು ಎಚ್ಚರಿಸಿದರು.

ಈಗ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಕ್ಯಾನ್ಸರ್ ನಂತಹ ರೋಗಗಳಿಗೆ ಚಿಕಿತ್ಸೆ ಪಡೆಯಬಹುದು. ಹೊಸ ಹೊಸ ಚಿಕಿತ್ಸೆಗಳ ಮೂಲಕ  ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಿ ತಪಾಸಣೆ ಮಾಡಿಸಿಕೊಂಡಲ್ಲಿ, ಸುಲಭವಾಗಿ ಗುಣಪಡಿಸಿಕೊಳ್ಳಬಹುದು.  ಆತ್ಮವಿಶ್ವಾಸ ದಿಂದ ಈ ಕಾಯಿಲೆಯನ್ನು ಎದುರಿಸಿ ಜಯ ಗಳಿಸಬೇಕಾಗಿದೆ ಎಂದರು.

ಕ್ಯಾನ್ಸರ್‌ನಿಂದ ಗುಣಮುಖರಾದ ಕಲಾವಿದ ಹಾಗೂ ಇಂಜಿನಿಯರ್‌ ಆರ್.ಟಿ. ಅರುಣ್ ಕುಮಾರ್ ಮಾತನಾಡಿ, ಒಂದು ಕಾಲದಲ್ಲಿ ಕ್ಯಾನ್ಸರ್ ಒಂದು ವಾಸಿಯಾಗದ ದೊಡ್ಡ ಕಾಯಿಲೆಯಾಗಿತ್ತು. ಆದರೆ, ಈಗ ಕಾಲ ಬದಲಾಗಿದೆ ಕ್ಯಾನ್ಸರ್ ರೋಗವನ್ನು ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಪಡಿಸಬಹುದಾಗಿದೆ ಎಂದರು.

ಈ ರೀತಿ ಗುಣಮುಖರಾದ ಅನೇಕರಲ್ಲಿ ನಾನು ಕೂಡ ಒಬ್ಬ. ಕ್ಯಾನ್ಸರ್ ರೋಗಿಗಳು §ಪ್ರಾರ್ಥಿಸಿ, ಎದುರಿಸಿ, ಜಯ ಗಳಿಸಿ¬ ಎಂಬ ಮೂರು ಪದಗಳ ಘೋಷವಾಕ್ಯವನ್ನು ಅಳವ ಡಿಸಿಕೊಂಡರೆ ಕ್ಯಾನ್ಸರ್ ಕಾಯಿಲೆಯಿಂದ ಗುಣಮುಖರಾಗಬಹುದು ಎಂದರು.

ಇದೇ ವೇಳೆ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಕುರಿತ ಭಿತ್ತಿ ಚಿತ್ರಗಳನ್ನು ಬಿಡುಗಡೆಗೊಳಿಸಲಾಯಿತು. ಮತ್ತು ಎನ್‍ಜಿಓ ಸಂಸ್ಥೆಗಳಾದ ಸ್ಪೂರ್ತಿ, ಬೆಳಕು, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.

ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಜಿ.ಡಿ. ರಾಘವನ್ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿ ಕ್ಯಾನ್ಸರ್, ಹೃದ್ರೋಗ, ಅನಿಯಂತ್ರಿತ ಮಧುಮೇಹದಂತಹ ಅಸಾಂಕ್ರಾಮಿಕ ರೋಗಗಳಿಂದಲೇ ಶೇ. 60 ರಿಂದ 65 ರಷ್ಟು ಮರಣಗಳಾಗುತ್ತಿವೆ.  ಆಶಾ ಕಾರ್ಯಕರ್ತೆಯರ ಮೂಲಕ 30 ವರ್ಷ ಮೇಲ್ಪಟ್ಟವರ ಆರೋಗ್ಯ ಸ್ಥಿತಿಗತಿ ಕುರಿತು ಜಿಲ್ಲೆಯಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಎಸ್.ಎಸ್. ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ಲಿಂಗನಗೌಡ ಪಾಟೀಲ್, ಡಿಯುಡಿಸಿ ಯೋಜನಾಧಿಕಾರಿ ನಜ್ಮಾ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಗಂಗಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ರೇಷ್ಮ ಕೌಸರ್ ಹಾಗೂ ಇತರರಿದ್ದರು.

error: Content is protected !!