ಬಸವಾದಿ ಶಿವಶರಣರದು ಜೀವಾಲಯ ಸಂಸ್ಕೃತಿ

ದಾವಣಗೆರೆ, ಫೆ.8- ನಮ್ಮದು ಜೀವಾಲಯ ಸಂಸ್ಕೃತಿ. ದೇವಾಲಯ ಸಂಸ್ಕೃತಿ ಜಡ ಸಂಸ್ಕೃತಿಯಾದರೆ, ಬಸವಾದಿ ಶರಣರದು ಜೀವಾಲಯ ಸಂಸ್ಕೃತಿ ಎಂದು ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ನುಡಿದರು.

ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ವಿರಕ್ತಮಠ, ಶ್ರೀ ಜಗದ್ಗುರು ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ವತಿಯಿಂದ ಮೊನ್ನೆ ಹಮ್ಮಿಕೊಂಡಿದ್ದ ಶರಣ ಸಂಗಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಾಮಾಜಿಕ ಕ್ಷೇತ್ರದಲ್ಲಿ ಹಿನ್ನೆಡೆ ಆಗುತ್ತಿರುವುದಕ್ಕೆ ಮುಖ್ಯ ಕಾರಣ ಜಾತಿವಾದ. ಜಾತಿವಾದ ಎಲ್ಲಿರುತ್ತದೆಯೋ ಅಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತದೆ. ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಅಪರಾಧ  ಎಂದು ಹೇಳಿದ್ದಾರೆ. ಸಮಾಜದಲ್ಲಿ  ಜಾತಿವಾದ ಇನ್ನೂ ಜೀವಂತ ವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಅಸ್ಪೃಶ್ಯತೆ ನಿವಾರಣೆಯಾಗಬೇಕಿದೆ. 12 ನೇ ಶತಮಾನದ ನಂತರ ಬಸವಣ್ಣನವರ ಚಿಂತನೆಗಳು ಮುರುಘಾಮಠದಲ್ಲಿ ಅನುಷ್ಠಾನ ಗೊಂಡಿದೆ. ಜಾತಿವಾದ ತೊಲಗಬೇಕು. ಜಾತ್ಯತೀತ ವಾದ ಉಳಿಯಬೇಕಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಜಾತಿವಾದ, ಧಾರ್ಮಿಕ ಕ್ಷೇತ್ರದಲ್ಲಿ ಮೂಲಭೂತ ವಾದ ಇದೆ ಎಂದರು.

ಎಲ್ಲ ದಾರ್ಶನಿಕರು ಮೂಲಭೂತವಾದದ ವಿರುದ್ಧ ಹೋರಾಡಿದರು. ಇನ್ನೊಂದು ಅಡಚಣೆ ಎಂದರೆ ಪ್ರತ್ಯೇಕತಾವಾದ. ಇದು ಸಾಮಾಜಿಕ ಬೆಳವಣಿಗೆಗೆ ದೊಡ್ಡ ಪೆಟ್ಟು ಜಾತಿವಾದ. ಮೂಲಭೂತವಾದ ಮತ್ತು ಪ್ರತ್ಯೇಕತಾ ವಾದದ ಬಗ್ಗೆ ಜಾಗೃತಿ ಅಗತ್ಯವೆಂದರು. 

`ಸಾಮಾಜಿಕ ಸಾಮರಸ್ಯಕ್ಕೆ ಎದುರಾಗುವ ಅಡಚಣೆಗಳೇನು?’ ವಿಷಯ ಕುರಿತು ಮಾತನಾಡಿದ ಚಿತ್ರದುರ್ಗದ ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ಅವರು, ಸಾಮರಸ್ಯ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಸಾಮರಸ್ಯ ಇಲ್ಲವಾದಲ್ಲಿ ಸಂಘ ಜೀವಿಗಳಾಗಿ ವಾಸಿಸಲು ಅಸಾಧ್ಯ ಎಂದರು.

ಇವತ್ತಿನ ಆಧುನಿಕ ಕಾಲದಲ್ಲಿ ಸಾಮರಸ್ಯ ಮರೆ ಮಾಚುವ ವಾತಾವರಣ ಕಾಣುತ್ತಿದ್ದೇವೆ. ಆದರೆ ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಮುರುಘಾ ಮಠ  ಮತ್ತು ಮುರುಘಾ ಶರಣರು ಎಂದು ಹೇಳಿದರು.

ಜಾತಿ ವ್ಯವಸ್ಥೆ, ಅಸಮಾನತೆ, ಮತಾಂತರ, ಗಡಿ ಸಮಸ್ಯೆ ಮುಂತಾದ ಅನಿಷ್ಟ ಪದ್ಧತಿಗಳೇ ಸಾಮಾಜಿಕ ಸಾಮರಸ್ಯಕ್ಕೆ ಎದುರಾಗುವ ಅಡಚಣೆಗಳು ಎಂದು ಪ್ರತಿಪಾದಿಸಿದರು.

ಸಾಮಾಜಿಕ ಸಾಮರಸ್ಯ ಇಲ್ಲದಿದ್ದರೆ ದೇಶಕ್ಕೆ ಧಕ್ಕೆ ಉಂಟಾಗುತ್ತದೆ. ಪ್ರತಿಯೊಬ್ಬರೂ ಸಹ ನೆಮ್ಮದಿ ಜೀವನ ನಡೆಸಲು ಸಾಮರಸ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

`ಅರಿವಿನ ಸಿರಿ ಚನ್ನಬಸವಣ್ಣ’ ಕೃತಿಯ ಕೃತಿಕಾರ ಪ್ರೊ. ಹೆಚ್. ಲಿಂಗಪ್ಪ ಮಾತನಾಡಿ, ಬುದ್ದನ ಚಿಂತನೆಗಳು ಜಗತ್ತಿನಲ್ಲಿ ಸಾರ್ವತ್ರಿಕ ಸತ್ಯವಾಗಿವೆ. ಆತನ ವಿಚಾರಗಳು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು.

ಚನ್ನಬಸವಣ್ಣನವರಲ್ಲಿ ಸಾಮಾಜಿಕ ಬದ್ಧತೆ ಇತ್ತು. ಅಸಾಧಾರಣ ಸಾಧನೆಯಿತ್ತು. ಎಲ್ಲಾ ಕಲೆಗಳನ್ನು ಕರಗತ ಮಾಡಿಕೊಂಡಿದ್ದ ಮಹಾನ್ ಶರಣರು ಎಂದು ಬಣ್ಣಿಸಿದರು.

ಹರಿಹರ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿದರು. `ಅರಿವಿನ ಸಿರಿ ಚನ್ನಬಸವಣ್ಣ’ ಕೃತಿಯ ಪರಿಚಯವನ್ನು ಸಾಹಿತಿ ಡಾ. ಎನ್.ಜೆ. ಶಿವಕುಮಾರ್ ಮಾಡಿದರು. ನೀನಾಸಂ ಪದವೀಧರ, ಶಿಕ್ಷಕ ಕಲ್ಲೇಶ್ ಉಪಸ್ಥಿತರಿದ್ದರು.

ಪ್ರತಿಭಾ ಪಿ. ದೊಗ್ಗಳ್ಳಿ ಸ್ವಾಗತಿಸಿದರು. ಎನ್.ಜೆ. ಶಿವಕುಮಾರ್ ನಿರೂಪಿಸಿದರು. ನಂತರ ರಂಗಕರ್ಮಿ ಮಹಾಂತೇಶ ಅದಿಮ ಅವರ ನಿರ್ದೇಶನದ, ಹೆಚ್. ಡುಂಡಿರಾಜ್ ಅವರ ಹಾಸ್ಯ ನಾಟಕ `ಪುಕ್ಕಟೆ ಪ್ರಚಾರ’ ನಾಟಕವನ್ನು ರಂಗಚೇತನ ಕಲಾವಿದರು ಪ್ರಸ್ತುತ ಪಡಿಸಿದರು.

error: Content is protected !!