ದಾವಣಗೆರೆ,ಫೆ.8- ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಕೆಲವೊಂದು ಯೋಜನೆಗಳ ಅನುಷ್ಠಾನ ಅತ್ಯಂತ ಅವಶ್ಯವಾಗಿರುತ್ತದೆ. ಈ ಯೋಜನೆಗಳ ಕುರಿತು ಪ್ರಸ್ತಾವನೆಗಳು ಈಗಾಗಲೇ ಸರ್ಕಾರದ ಮಟ್ಟದಲ್ಲಿದ್ದು, ಇವುಗಳನ್ನು ರಾಜ್ಯ ಬಜೆಟ್ನಲ್ಲಿ ಘೋಷಣೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಪತ್ರ ಬರೆದು ಒತ್ತಾಯಿಸಿದ್ದಾರೆ.
ದಾವಣಗೆರೆ ಇನ್ನೂ ಸರ್ವತೋಮುಖ ಅಭಿವೃದ್ದಿ ಹೊಂದಲು ವಿಮಾನಯಾನ ಸೌಲಭ್ಯದ ಅವಶ್ಯಕತೆಯಿದೆ. ಅಗತ್ಯವಾಗಿರುವ ಸುಮಾರು 500 ಎಕರೆಯಷ್ಟು ಭೂಮಿ ಯನ್ನು ಗುರುತಿಸಲಾ ಗಿದೆ. ಭೂ-ಸ್ವಾಧೀನ ಮತ್ತು ಅಗತ್ಯ ಮೂಲ ಸೌಕರ್ಯ ಒದಗಿಸುವ ಸಂಬಂಧ ಬಜೆಟ್ನಲ್ಲಿ ಅನುದಾನದ ಅವಕಾಶ ಕಲ್ಪಿಸಿಕೊಡಬೇಕು.
ವೈದ್ಯಕೀಯ ಶಿಕ್ಷಣ ಸಚಿವರು ಅಗತ್ಯ ಜಮೀನು ಇನ್ನಿತರೆ ವಿಷಯಗಳ ಕುರಿತು ಪ್ರಾಥಮಿಕ ಮಾಹಿತಿ ಪಡೆದುಕೊಂಡಿರುತ್ತಾರೆ. ಬಜೆಟ್ನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜನ್ನು ಮಂಜೂರು ಮಾಡುವಂತೆ ಅವರು ಕೇಳಿಕೊಂಡಿದ್ದಾರೆ.
ಜಿಲ್ಲೆಗೆ ಕೃಷಿ ಮಹಾವಿದ್ಯಾಲಯ ಸ್ಥಾಪನೆಯಾಗಬೇಕು ಎಂಬುದು ಹಲವಾರು ವರ್ಷಗಳ ಕನಸಾಗಿದೆ. ಕೃಷಿ ಮಹಾವಿದ್ಯಾಲಯ ಸ್ಥಾಪನೆ ಮಾಡಲು ಅಗತ್ಯವಾದ ಜಮೀನು ಹಾಗೂ ಮೂಲಭೂತ ಸೌಕರ್ಯಗಳು ಲಭ್ಯವಿರುವುದರಿಂದ ಹಾಗೂ ಯಾವುದೇ ಆರ್ಥಿಕ ಹೊರೆಯಾಗದಂತೆ ಕೃಷಿ ಮಹಾವಿದ್ಯಾಲಯವನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಬಹುದು
ಹೆಚ್.ಕಲ್ಪನಹಳ್ಳಿ ಬಳಿ ಸುಮಾರು 14 ಎಕರೆ ಜಮೀನನ್ನು ಸರ್ಕಾರ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಒಕ್ಕೂಟಕ್ಕೆ ಮಂಜೂರು ಮಾಡಿದ್ದು, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯಲ್ಲಿರುವ 659 ಕಾರ್ಯನಿರತ ಸಂಘಗಳಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಪ್ರತಿದಿನ 3.0 ಲಕ್ಷ ಲೀಟರ್ (5.0 ಲಕ್ಷ ಲೀಟರ್ಗೆ ವಿಸ್ತರಿಸಬಹುದಾದ) ಸಾಮರ್ಥ್ಯದ ಆತ್ಯಾಧುನಿಕ ಮೆಗಾ ಡೈರಿಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿರುವ ಸಂಸದರು ಮನವಿ ಪ್ರತಿಯನ್ನು ಸಂಬಂಧಿತ ಇಲಾಖಾ ಸಚಿವ ವಿ. ಸೋಮಣ್ಣ, ಡಾ. ಕೆ. ಸುಧಾಕರ್, ಬಿ.ಸಿ. ಪಾಟೀಲ್ ಮತ್ತು ಎಸ್.ಟಿ. ಸೋಮಶೇಖರ್ ಅವರುಗಳಿಗೂ ಕಳುಹಿಸಿದ್ದಾರೆ.