ಹರಿಹರ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ ಗುಂಪು
ಹರಿಹರ, ಫೆ.7 – ಪ್ರಾರ್ಥನಾ ಮಂದಿರವೊಂದರ ಚಿತ್ರವನ್ನು ಪ್ರಚೋದನಕಾರಿಯಾಗಿ ಸಾಮಾಜಿಕ ಜಾಲತಾಣ ದಲ್ಲಿ ಪ್ರಕಟಿಸಲಾಗಿದೆ ಎಂಬ ಆರೋಪ ನಗರದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ. ಯುವಕನೋರ್ವ ಪವಿತ್ರ ಸ್ಥಳವನ್ನು ನಿಂದಿಸಿ ಎರಡು ಕೋಮುಗಳ ನಡುವೆ ದ್ವೇಷ ತರುವ ಯತ್ನ ನಡೆಸಿದ್ದಾನೆ ಎಂದು ಹೆಚ್.ಹಿದಾಯತ್ ಎಂಬುವವರು ನಗರ ಠಾಣೆ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಕೋಮು ದ್ವೇಷಕ್ಕೆ ಕಾರಣವಾಗುವ ರೀತಿಯಲ್ಲಿ ಜಾಲತಾಣಗಳಲ್ಲಿ ಚಿತ್ರಗಳನ್ನು ಪ್ರಕಟಿಸಿರುವ ವ್ಯಕ್ತಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.
ಈ ನಡುವೆಯೇ, ಪೆಟ್ರೋಲ್ ಬಂಕ್ ಒಂದರಲ್ಲಿ ಬೇರೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ಚಕಮಕಿ ನಡೆದಿತ್ತು ಈ ಸಂದರ್ಭದಲ್ಲಿ ಒಬ್ಬ ಹುಡುಗನ ತಲೆಗೆ ಹೊಡೆಯಲಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಜನರು ನಗರದ ಪೊಲೀಸ್ ಠಾಣೆಯ ಮುಂದೆ ನೆರೆದಿದ್ದರು.
ಪ್ರಾರ್ಥನಾ ಮಂದಿರದ ಪ್ರಕರಣಕ್ಕೆ ಸಂಬಂಧಿ ಸಿದಂತೆ ಇವರು ಠಾಣೆಯಲ್ಲಿ ಸೇರಿದ್ದಾರೆ ಎಂಬ ತಪ್ಪು ಕಲ್ಪನೆ ಉಂಟಾಗಿ ಇನ್ನಷ್ಟು ಜನರು ಠಾಣೆಯ ಬಳಿ ಜಮಾಯಿಸಿದರು. ಜನರನ್ನು ಚೆದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.
ನಗರಸಭಾ ಸದಸ್ಯರಾದ ಜಾವೀದ್, ಮುಜಾ ಮಿಲ್ ಬಿಲ್ಲು, ಮುಖಂಡರಾದ ದಾದಾಪೀರ್, ಸನಾವುಲ್ಲಾ, ಹಬೀಬ್, ಹಾಜಿ ಅಲಿ ಹಾಗೂ ಬಿಜೆಪಿ ಘಟಕದ ಅಧ್ಯಕ್ಷ ಅಜಿತ್ ಸಾವಂತ್ ಹಾಗೂ ಹಿಂದೂ ಸಂಘಟನೆಯ ಮುಖಂಡರಾದ ರವಿ ರಾಯ್ಕರ್ ಮತ್ತಿತರರು ಸಂದರ್ಭದಲ್ಲಿದ್ದರು.
ಸಿಪಿಐ ಸತೀಶ್ ಕುಮಾರ್ ಹಾಗೂ ಪಿಎಸ್‌ಐ ಬಸವರಾಜ ತೇಲಿ ಸೇರಿದಂತೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು.