ಹರಪನಹಳ್ಳಿ, ಫೆ. 7- ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಸ್ಥಾನವಾದ ಅರಸೀಕೆರೆ ಗ್ರಾಮದ ಬಸ್‍ನಿಲ್ದಾಣ, ಚಿಕ್ಕಕೆರೆ ಹಾಗೂ ಅದರ ಅಕ್ಕಪಕ್ಕದಲ್ಲಿ ತಲೆ ಎತ್ತಿನಿಂತಿದ್ದ ಅನಧಿಕೃತ ಗೂಡಂಗಡಿಗಳ ತೆರವು ಕಾರ್ಯಾಚರಣೆ ಕಾರ್ಯ ಸೋಮವಾರ ಬೆಳಿಗ್ಗೆ ನಡೆಯಿತು.
ಅರಸೀಕೆರೆ ದಾವಣಗೆರೆ, ಜಗಳೂರು, ಕೊಟ್ಟೂರು, ಹರಪನಹಳ್ಳಿ ಸೇರಿದಂತೆ ಮೂರ್ನಾಲ್ಕು ತಾಲ್ಲೂಕುಗಳ ಸಂಪರ್ಕ ಬೆಸೆಯುವ ಪ್ರಮುಖ ಕೇಂದ್ರವಾಗಿದ್ದು, ಗ್ರಾಮ ಬೆಳವಣಿಗೆಯಾದಂತೆಲ್ಲಾ, ವಾಹನ ಸಂಚಾರ ದಟ್ಟಣೆಯೂ ಅಧಿಕವಾಗಿದೆ. ಹೀಗಾಗಿ ಗೂಡಂಗಡಿಗಳು ಬಸ್‍ನಿಲ್ದಾಣಕ್ಕೆ ಹೊಂದಿಕೊಂಡಂತೆ ವ್ಯಾಪಾರ ವಹಿವಾಟು ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸಂಚಾರಕ್ಕೆ ಸಾಕಷ್ಟು ತೊಂದರೆ ಆಗುತ್ತಿತ್ತು.
ಜತೆಗೆ, ನಾಲ್ಕಾರು ತಾಲ್ಲೂಕುಗಳ ಸಂಪರ್ಕ ಬೆಸೆಯುವ ಕೇಂದ್ರಸ್ಥಾನವಾದ ಹಿನ್ನೆ ಲೆಯಲ್ಲಿ ಹಾಗೂ ಮಂಡ್ಯ- ಹೂವಿನಹಡಗಲಿ ರಾಜ್ಯಹೆದ್ದಾರಿ ಗ್ರಾಮದ ಮೂಲಕ ಹಾದು ಹೋಗಿದೆ. ಹೀಗಾಗಿ, ಶಾಸಕ ಎಸ್.ವಿ. ರಾಮಚಂದ್ರ ಅವರ ಮುತುವರ್ಜಿ ಯಿಂದಾಗಿ, ಈಗಾಗಲೇ ಗ್ರಾಮದಲ್ಲಿ ನೂತನ ಬಸ್‍ನಿಲ್ದಾಣ ನಿರ್ಮಾಣ, ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಾಗಿ ಅನುದಾನವೂ ಸಹ ಬಿಡುಗಡೆಯಾಗಿದೆ. ಈ ಹಿನ್ನೆಲೆಯಲ್ಲಿ ಆರಂಭದಲ್ಲಿ ಬಸ್‍ನಿಲ್ದಾಣ ಹಾಗೂ ಅದಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ ಅಕ್ಕಪಕ್ಕದಲ್ಲಿನ ಗೂಡಂಗಡಿಗಳ ತೆರವು ಕಾರ್ಯಾಚರಣೆ ನಡೆಸಲಾಯಿತು.
ಜಗಳೂರು ಮತ ಕ್ಷೇತ್ರ ವ್ಯಾಪ್ತಿಗೆ ಒಳ ಪಡುವ ಅರಸೀಕೆರೆ ಗ್ರಾಮದಲ್ಲಿ ಪೌರಾಣಿಕ ಹಾಗೂ ಶೋಷಿತ ಸಮುದಾಯದ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ದಂಡಿನ ದುರುಗಮ್ಮದೇವಿ ಜಾತ್ರೆ ಹಾಗೂ ಗ್ರಾಮದ ಸಮೀಪದಲ್ಲಿರುವ ಉಚ್ಚಂಗಿದುರ್ಗದ ಐತಿಹಾಸಿಕ ಉತ್ಸವಾಂಭ ಜಾತ್ರೆಗಳು ಈ ಭಾಗದ ಬಹುದೊಡ್ಡ ಧಾರ್ಮಿಕ ಉತ್ಸವಗ ಳಾಗಿರುವುದರಿಂದ ಸಹಜವಾಗಿಯೇ ಇಲ್ಲಿ ದೊಡ್ಡ ಜನ ಜಂಗುಳಿಯೇ ನೆರೆಯುತ್ತದೆ.
ಗ್ರಾಮದ ಅಭಿವೃದ್ಧಿ ಹಿತಾಸಕ್ತಿಯಿಂದ ಅಂಗಡಿಗಳ ಮಾಲೀಕರು ಸಹ ತೆರವುಗೊಳಿಸಲು ಸಹಕಾರ ನೀಡಿದ್ದಾರೆ. ಶೀಘ್ರದಲ್ಲಿಯೇ ನಿಗದಿತ ಅವಧಿಯಲ್ಲಿ ಬಸ್‍ನಿಲ್ದಾಣ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ, ಅದಕ್ಕೆ ಹೊಂದಿಕೊಂಡಂತೆ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಈಗಾಗಲೇ ನೀಲಿನಕ್ಷೆ ರೂಪಿಸಲಾಗಿದ್ದು, ವಾಣಿಜ್ಯ ಮಳಿಗೆಗಳು ಪೂರ್ಣಗೊಂಡ ಬಳಿಕ, ವ್ಯಾಪಾರಸ್ಥರ ವ್ಯಾಪಾರ, ವಹಿವಾಟಿಗೆ ಪುನಃ ಅವಕಾಶ ಕಲ್ಪಿಸಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರಪ್ಪ ತಿಳಿಸಿದರು.
ಗ್ರಾಮ ಪಂಚಾಯ್ತಿ ಕೈಗೆತ್ತಿಕೊಂಡಿದ್ದ ತೆರವು ಕಾರ್ಯಾಚರಣೆಗೆ ಸ್ಥಳೀಯ ಪೊಲೀಸ್ ಇಲಾಖೆಯ ಪಿಎಸ್‍ಐ ನಾಗರತ್ನ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ನಿಯೋಜಿಸಲಾಗಿತ್ತು. ಅಭಿವೃದ್ಧಿ ಅಧಿಕಾರಿ ಅಂಜಿನಪ್ಪ, ಪಿಎಸ್‍ಐ ನಾಗರತ್ನ ಸೇರಿದಂತೆ ಪ್ರಮುಖರು ತೆರವು ಕಾರ್ಯಾಚರಣೆ ಸಂದರ್ಭದಲ್ಲಿ ಹಾಜರಿದ್ದರು.
ಗೂಡಂಗಡಿ ತೆರವು ಕಾರ್ಯಾಚರಣೆಗೆ ವಿರೋಧ : ಗ್ರಾಮದ ಬಸ್‍ನಿಲ್ದಾಣ ಹಾಗೂ ಚಿಕ್ಕಕೆರೆ ಸಮೀಪದಲ್ಲಿ ಸಣ್ಣಪುಟ್ಟ ಹೋಟೆಲ್, ಕಿರಾಣಿ ಅಂಗಡಿ, ಪಾನ್‍ಶಾಪ್, ಹಣ್ಣಿನ ಅಂಗಡಿ, ಕೋಳಿ ಅಂಗಡಿ ಸೇರಿದಂತೆ ವಿವಿಧ ಸಣ್ಣಪುಟ್ಟ ಅಂಗಡಿಗಳನ್ನು ನಡೆಸುವ ಮೂಲಕ ಸುಮಾರು 25-30 ಕುಟುಂಬ ಗಳು ಕಳೆದ 30 ವರ್ಷಗಳಿಂದಲೂ ಜೀವನ ನಡೆಸುತ್ತಿದ್ದವು. ಆದರೆ, ಈಗ ಏಕಾಏಕಿ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಆ ಕುಟುಂಬಗಳ ಬದುಕಿಗೆ ಆಸರೆಯಾಗಿದ್ದ ವಾಪಾರ, ವಹಿವಾಟನ್ನು ಸ್ಥಗಿತಗೊಳಿಸುವ ಕ್ರಮ ಸರಿಯಲ್ಲ ಎಂದು ದಲಿತ, ಶೋಷಿತ ಸಮಾಜ ಸಂಘರ್ಷ ಸಮಿತಿ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದೆ.
ಅಭಿವೃದ್ಧಿ ಕಾರ್ಯಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಸುಮಾರು ಐವತ್ತಕ್ಕೂ ಅಧಿಕ ಕುಟುಂಬಗಳ ಜೀವನಾಧಾರಕ್ಕೆ ಆಸರೆ ಯಾಗಿದ್ದ ಸಣ್ಣ ವ್ಯಾಪಾರಸ್ಥರನ್ನು ಬೀದಿಪಾಲು ಮಾಡಿದ್ದು ಸರಿಯಲ್ಲ. ಕೇವಲ ಮೂರು ದಿನಗಳ ಹಿಂದೆ ಡಂಗೂರ ಸಾರುವ ಮೂಲಕ ತೆರವುಗೊಳಿಸುವಂತೆ ಸೂಚಿಸಿ ದ್ದಾರೆ. ಕೇವಲ ಮೂರೇ ದಿನಗಳಲ್ಲಿ ಹೇಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬುದನ್ನು ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕಿತ್ತು. ಕನಿಷ್ಠ ಮೂರು ತಿಂಗಳ ಕಾಲಾವಕಾಶ ನೀಡಿದ್ದರೆ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವ ಮೂಲಕ ವ್ಯಾಪಾರಿಗಳೇ ಸ್ವಯಂಪ್ರೇರಿತವಾಗಿ ತೆರವು ಮಾಡುತ್ತಿದ್ದರು. ಇದು ಬಡ ಕುಟುಂಬಗಳ ಮೇಲೆ ಅಧಿಕಾರಿಗಳ ದೌರ್ಜನ್ಯದ ಕ್ರಮ ಎಂದು ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯ ವಿಜಯನಗರ ಜಿಲ್ಲಾ ಅಧ್ಯಕ್ಷ ಕಬ್ಬಳ್ಳಿ ಬಸವರಾಜ, ಸಮಿತಿ ಮುಖಂಡರಾದ ಹಾದಿಮನಿ ನಾಗರಾಜ, ಕೆ. ರಾಜಪ್ಪ, ಮುಜಾಮಿಲ್, ಮಕರಬ್ಬಿ ಹುಲುಗಪ್ಪ, ಕೆ. ಅಭಿಷೇಕ, ಎ.ಬಿ. ಪ್ರದೀಪಗೌಡ, ಎ.ಬಿ. ಶಂಭುಲಿಂಗನಗೌಡ, ಎಂ.ಎಸ್. ಶ್ರೀನಿವಾಸಶೆಟ್ಟಿ ಹಾಗೂ ಇತರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.