ಮಲೇಬೆನ್ನೂರು, ಫೆ.6- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಶ್ರೀಗುರು ಕರಿಬಸವೇಶ್ವರ ಗದ್ದುಗೆ ಟ್ರಸ್ಟ್ ಕಮಿಟಿ ವತಿಯಿಂದ ಸುಮಾರು 1 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ನಿಲಯವನ್ನು ಭಾನುವಾರ ಬೆಳಿಗ್ಗೆ ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 22 ಜೋಡಿ ವಧು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕೋವಿಡ್ ಕಾರಣದಿಂದಾಗಿ ಸರಳವಾಗಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನೂತನ ವಧು-ವರರಿಗೆ ಶುಭ ಹಾರೈಸಿ, ಆಶೀರ್ವಚನ ನೀಡಿದ ಶ್ರೀಗಳು, ಆದರ್ಶ ಬದುಕು ರೂಪಿಸಿಕೊಳ್ಳಿ ಮತ್ತು ಮಕ್ಕಳಿಗೆ ಉತ್ತಮ ಸಂಸ್ಕಾರ, ಶಿಕ್ಷಣ ಕೊಡಿಸಿ ಎಂದು ಕರೆ ನೀಡಿದರು.
ಉಕ್ಕಡಗಾತ್ರಿ ಸುಕ್ಷೇತ್ರದಲ್ಲಿ ಭಕ್ತರ ಹಾಗೂ ಸರ್ಕಾರದ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ರಾಜಗೋಪುರ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಮುಂದಿನ ವರ್ಷ ರಥೋತ್ಸವದ ವೇಳೆಗೆ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸ್ವಾಮೀಜಿ ಹೇಳಿದರು.
ಗದ್ದುಗೆ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ವಾಸನದ ಜಿ.ನಂದಿಗೌಡ್ರು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಕಮಿಟಿ ನಿರ್ದೇಶಕರೂ ಆದ ನಂದಿ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿಗಳಿ ಇಂದೂಧರ್, ಟ್ರಸ್ಟ್ ಕಾರ್ಯದರ್ಶಿ ಸುರೇಶ್ ಮಾತನಾಡಿದರು.
ಟ್ರಸ್ಟ್ ಕಮಿಟಿ ನಿರ್ದೇಶಕರಾದ ವಿವೇಕಾನಂದ ಪಾಟೀಲ್, ಹೆಚ್.ವೀರನಗೌಡ, ಗದಿಗೆಯ್ಯ ಪಾಟೀಲ್, ಹೊಸಳ್ಳಿ ಗದಿಗೆಪ್ಪ, ಪ್ರಕಾಶ್ ಕೋಟೇರ, ನಾಗರಾಜ್ ದಿಲ್ಲಿವಾಲ, ರಾಜು ಹೆಡಿಯಾಲ, ಹನುಮಗೌಡ ಶಿವಪೂಜೆ, ಮಾಯಪ್ಪ, ಗದಿಗೆಪ್ಪ ಮರಾಠಿ ಮತ್ತಿತರರು ಭಾಗವಹಿಸಿದ್ದರು.