ರಾಣೇಬೆನ್ನೂರು : ಸಿದ್ಧಾರೂಢ ಮಠದ ಎರಡನೇ ದಿನದ ವೇದಾಂತ ಪರಿಷತ್ನಲ್ಲಿ ವಿದ್ಯಾನಂದ ಭಾರತಿ ಶ್ರೀಗಳು
ರಾಣೇಬೆನ್ನೂರು, ಫೆ. 6- ತಾಯಿ-ತಂದೆಯರನ್ನು ಗೌರವಿಸುವವ, ಅವರನ್ನು ವೃದ್ಧಾಶ್ರಮಕ್ಕೆ ಕರೆದೊಯ್ಯದವ ಉತ್ತಮ ಮಗನೆನಿಸಿಕೊಳ್ಳುತ್ತಾನೆ ಎಂದು ಹಂಪಿ ಹೇಮಕೂಟ ಸಿದ್ಧಾರೂಢ ಮಠದ ಶ್ರೀ ವಿದ್ಯಾನಂದ ಭಾರತಿ ಮಹಸ್ವಾಮೀಜಿ ನುಡಿದರು.
ಶ್ರೀಗಳು ಇಲ್ಲಿನ ಸಿದ್ಧಾರೂಢ ಮಠದ ಎರಡನೇ ದಿನದ ವೇದಾಂತ ಪರಿಷತ್ ನಲ್ಲಿ `ಗೂಡಿಕೆಡದಿರಿ ಭಾಗ್ಯವಿಲ್ಲದಾಗದು ಬಿಡದೆ’ ವಿಷಯ ಕುರಿತು ಬೋಧಿಸುತ್ತಿದ್ದರು.
ಜನ್ಮ ಜನ್ಮದಲ್ಲಿ ಮಾಡಿದ ಉತ್ತಮ ಕಾರ್ಯಗಳಿಂದ ಪುಣ್ಯಪ್ರಾಪ್ತಿ ಆಗಲಿದೆ. ಆ ಪುಣ್ಯದಿಂದ ಶ್ರೇಷ್ಠ ಕುಲದಲ್ಲಿ ಹುಟ್ಟಬಹುದಾಗಿದೆ. ಉತ್ತಮ ನಡೆ-ನುಡಿಯ ಪತಿವ್ರತಾ ಹೆಂಡತಿ ದೊರಕಲು ಸಹ ಪುಣ್ಯ ಸಂಪಾದನೆ ಅವಶ್ಯವಿದೆ ಎಂದು ಶ್ರೀಗಳು ನುಡಿದರು.
ನಮ್ಮ ವಾಣಿ ನಯ-ವಿನಯದಿಂದ ಕೂಡಿರಬೇಕು. ನಮ್ಮ ಮಾತುಗಳು ಮತ್ತೊಬ್ಬರಿಗೆ ನೋವುಂಟು ಮಾಡುವಂತಿರಬಾರದು. ನಮ್ಮ ಬೋಧನೆ, ಭಾಷಣಗಳು ಮತ್ತೊಬ್ಬರ ಮನಸ್ಸುಗಳನ್ನು ಕೆರಳಿಸುವಂತಿರಬಾರದು. ಬೇರೆಯವರ ಮನಸ್ಸುಗಳನ್ನು ಅರಳಿಸುವಂತಿರಬೇಕು ಎಂದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಮಲ್ಲಯ್ಯಜ್ಜ ಹೇಳಿದರು.
ಕೊನೆಯಲ್ಲಿ ಮಹಾಮಂಗಳಾರತಿ ಮಾಡಿದ ಸೌಟಗಿ ಲಿಂಗಯ್ಯ ಸ್ವಾಮಿಗಳು, ಹುಬ್ಬಳ್ಳಿ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮಿಗಳು, ಅಭಿನವ ಸಿದ್ಧಾ ರೂಢ ಸ್ವಾಮಿಗಳು, ನೆಲಮಂಗಲ ಮಠದ ಮಾತೋಶ್ರೀ ಉಮಾಭಾರತಿ ಪಾಲ್ಗೊಂಡಿದ್ದು, ಸಂಜೆ `ಸುರನರೋರಗದನುಜ ಮನುಮುನೀಶ್ವರ ತರ್ಕ’ ವಿಷಯ ಕುರಿತು ಉಪದೇಶಾಮೃತ ನೀಡಿದರು.
ಕರಬಸಪ್ಪ ಮಾಕನೂರ, ಶಂಕರಗೌಡ ಆಸಂಗಿ, ಪೂರ್ಣಿಮಾ ಕುರವತ್ತಿ, ಪೂರ್ಣಿಮಾ ಅಯ್ಯನಗೌಡ್ರ, ಬಸಯ್ಯ ಎಮ್ಮಿಮಠ, ಎಸ್.ಎಸ್. ಕುರವತ್ತಿ, ರೇವಣ್ಣ ಉಪಸ್ಥಿತರಿದ್ದರು.