ದೂಡಾ ಬಡಾವಣೆಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲು ನಿರ್ಧಾರ
ದಾವಣಗೆರೆ, ಫೆ. 4 – ಹಳೆ ಕುಂದುವಾಡ ಗ್ರಾಮದ ಬಳಿ ದೂಡಾದಿಂದ ಹೊಸ ಬಡಾವಣೆ ನಿರ್ಮಾಣಕ್ಕೆ ರೈತರಿಂದ ಖರೀದಿಸುವ ಭೂಮಿಗೆ ಎಕರೆಗೆ 1.28 ಕೋಟಿ ರೂ. ದರ ನಿಗದಿ ಪಡಿಸಲು ಹಾಗೂ ಸರ್ಕಾರಿ ದರದಲ್ಲಿ ಒಂದು ನಿವೇಶನ ನೀಡಲು ಜಿಲ್ಲಾಡಳಿತ ಕರೆದಿದ್ದ ಸಭೆಯಲ್ಲಿ ಸಮ್ಮತಿ ವ್ಯಕ್ತವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ರೈತರು ಹಾಗೂ ದೂಡಾ ಅಧಿಕಾರಿಗಳ ಸಭೆ ಕರೆಯಲಾಗಿತ್ತು.
ತಮ್ಮ ಜಮೀನು ನಗರಕ್ಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಹತ್ತಿರದಲ್ಲಿದೆ. ಹೀಗಾಗಿ ಹೊಲಗಳಿಗೆ ಪ್ರಾಧಿಕಾರದಿಂದ ಸೂಕ್ತ ಬೆಲೆ ಹಾಗೂ ಒಂದು ನಿವೇಶನ ನೀಡಬೇಕೆಂದು ಕೇಳಿದರು.
ಈ ಬಗ್ಗೆ ಚರ್ಚಿಸಿದ ನಂತರ ಎಕರೆಗೆ 1.28 ಕೋಟಿ ರೂ. ಹಾಗೂ ಸರ್ಕಾರಿ ದರದಲ್ಲಿ ನಿವೇಶನ ಕೊಡುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಯಿತು.
ಈ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳಿಸಲಾಗುವುದು. ಸರ್ಕಾರದ ಒಪ್ಪಿಗೆ ಸಿಕ್ಕ ನಂತರ ಜಮೀನು ಖರೀದಿ ಪ್ರಕ್ರಿಯೆ ನಡೆಯ ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಜಿಲ್ಲಾಡಳಿತ ನಿಗದಿ ಪಡಿಸಿರುವ ಬೆಲೆಯೇ ಅಂತಿಮವಲ್ಲ. ಈ ಬಗ್ಗೆ ಪ್ರಸ್ತಾವನೆ ಮಾತ್ರ ಕಳಿಸಲಾಗಿದೆ. ಸರ್ಕಾರದಿಂದಲೇ ಅಂತಿಮ ನಿರ್ಧಾರವಾಗಲಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.
ಈ ಹಿಂದೆ ನಡೆದ ಸಭೆಗಳಲ್ಲಿ ರೈತರು ಹೆಚ್ಚಿನ ಪರಿಹಾರಕ್ಕಾಗಿ ಪಟ್ಟು ಹಿಡಿದಿದ್ದರು. ಹೀಗಾಗಿ ಜಮೀನು ವಶದ ವಿಷಯ ಬಗೆಹರಿದಿರಲಿಲ್ಲ.
ಹಳೆ ಕುಂದುವಾಡ ಗ್ರಾಮದ ವಿವಿಧ ಸರ್ವೆ ನಂಬರ್ಗಳಲ್ಲಿ 53 ಎಕರೆ ಜಮೀನು ವಶಪಡಿಸಿಕೊಂಡು ವಸತಿ ಯೋಜನೆ ರೂಪಿಸಲು ದೂಡಾ ಯೋಜಿಸಿದೆ. ಬೇಡಿಕೆ ಸಮೀಕ್ಷೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಸಲ್ಲಿಸಿದ್ದಾರೆ.
ಈ ಹಿಂದೆ ನಡೆದ ಸಭೆಯಲ್ಲಿ ಎಕರೆಗೆ 1.18 ಕೋಟಿ ರೂ. ಪರಿಹಾರ ನೀಡಲು ಪ್ರಸ್ತಾಪಿಸಲಾಗಿತ್ತು. ಆ ಪ್ರಸ್ತಾವನೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದರು.