ದಾವಣಗೆರೆ, ಜ.2- ನಗರ ಸ್ವಚ್ಛತೆ, ಧೂಳು ಮುಕ್ತ ನಗರ, ರಸ್ತೆ, ಒಳಚರಂಡಿ, ಫುಟ್ಪಾತ್ ನಿರ್ಮಾಣ, ಸಮರ್ಪಕ ಕಸ ವಿಲೇವಾರಿಗೆ ಆದ್ಯತೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯಗಳತ್ತ ಗಮನಹರಿಸಬೇಕೆಂಬ ಸಲಹೆಗಳು ಮಹಾನಗರ ಪಾಲಿಕೆ ಬಜೆಟ್ ಪೂರ್ವ ತಯಾರಿ ಸಭೆಯಲ್ಲಿ ಕೇಳಿಬಂದವು.
ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಸಂಜೆ ಬಜೆಟ್ ಪೂರ್ವ ತಯಾರಿಯ 2 ನೇ ಸಭೆ ನಡೆಯಿತು.
ಲೋಕಿಕೆರೆ ರಸ್ತೆಯ `ಕೈಗಾರಿಕಾ ವಸಾಹತು’ ಸ್ಥಾಪನೆಯಾಗಿ 18 ವರ್ಷಗಳು ಕಳೆದರೂ ಸಹ ಇನ್ನೂ ಮೂಲಭೂತ ಸೌಲ ಭ್ಯಗಳು ಮರೀಚಿಕೆಯಾಗಿದ್ದು, ಇದುವ ರೆಗೂ ಪಾಲಿಕೆ ಇತ್ತ ಗಮನ ಹರಿಸದಿರುವುದು ವಿಷಾದದ ಸಂಗತಿ. ಕೈಗಾರಿಕಾ ವಸಾಹತು ನಿಂದ ಪ್ರತಿ ತಿಂಗಳು 5 ಕೋಟಿ ರೂ. ಗಳನ್ನು ಜಿಎಸ್ಟಿ ಹಾಗೂ ಇತರೆ ತೆರಿಗೆ ಮೂಲ ಗಳಿಂದ ಪಾಲಿಕೆಗೆ ಆದಾಯ ಬರುತ್ತಿದೆ. ಒಳಚರಂಡಿ ಸೇರಿದಂತೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲವೆಂದು ಜಿಲ್ಲಾ ಸಣ್ಣ ಕೈಗಾರಿಕೆಗಳ ಉದ್ಯಮಿಗಳ ಸಂಘದ ಅಧ್ಯಕ್ಷ ಬಿ. ಶಂಭುಲಿಂಗಪ್ಪ ದೂರಿದರು.
ಕೈಗಾರಿಕಾ ವಸಾಹತು ನಿರ್ವಹಣೆಗಾಗಿ ಈ ಬಾರಿಯ ಬಜೆಟ್ನಲ್ಲಿ 10 ಲಕ್ಷ ರೂ. ಅನುದಾನವನ್ನು ಮೀಸಲಿರಿಸುವಂತೆ ಸಲಹೆ ನೀಡಿದರು. ನಗರದ ವಿವಿಧ ಭಾಗಗಳಲ್ಲಿರುವ ಸಮುದಾಯ ಭವನಗಳಿಗೆ ನೀಡಲಾಗುವ ಅನುದಾನವನ್ನು ಅನ್ಯ ಕಾಮಗಾರಿಗಳಿಗೆ ಬಳಕೆ ಮಾಡುವುದು ಬೇಡ. ಉದ್ದೇಶಿತ ಕಾಮಗಾರಿಗೆ ಮಾತ್ರ ಬಳಸುವಂತೆ ದಲಿತ ಮುಖಂಡ ಸೋಮಲಾಪುರ ಹನುಮಂತಪ್ಪ ಮನವಿ ಮಾಡಿದರು.
ರಸ್ತೆ ಬದಿ ಧೂಳು ಮತ್ತು ಕಸಗಳಿಂದ ನಗರದ ಜನತೆ ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಧೂಳು ಮುಕ್ತ ನಗರವನ್ನಾಗಿ ಮಾಡುವಂತೆ ಮತ್ತು ಇಂಗು ಗುಂಡಿಗಳನ್ನು ನಿರ್ಮಿಸುವಂತೆ ಐಗೂರು ಪ್ರಭು ಸಲಹೆ ನೀಡಿದರು. ನಗರದ ರಿಂಗ್ ರಸ್ತೆ ಬಳಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಎತ್ತರಿಸಲು ಪಾಲಿಕೆಯಿಂದ ಅನುದಾನ ಮೀಸಲಿಡಲು ಚಂದ್ರು ಮನವಿ ಮಾಡಿದರು.
ವಿಕಲಚೇತನರಿಗೆ ಸಮರ್ಪಕವಾಗಿ ಪಾಲಿಕೆಯಿಂದ ಸೌಲಭ್ಯಗಳು ದೊರೆಯುತ್ತಿಲ್ಲ. ಕೆಲವು ಇಲಾಖೆ ಸಿಬ್ಬಂದಿ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವೀರೇಶ್, ಸುರೇಶ್, ನಾಗಮ್ಮ, ಬಿ. ಸುನೀಲ್, ಅಶ್ರಫ್ ಅಲಿ, ರಾಜಶೇಖರ್ ದೂರಿದರು.
ವಿಶೇಷವಾಗಿ ಶೌಚಾಲಯದ ವ್ಯವಸ್ಥೆ, ಸ್ವಯಂ ಉದ್ಯೋಗಕ್ಕಾಗಿ ಒತ್ತು ನೀಡಲು ಜೆರಾಕ್ಸ್ ಮಿಷನ್, ಕ್ಯಾಮೆರಾ, ಟೈಲ್ಸ್ ಮಿಷನ್, ಶ್ರವಣ ದೋಷ ಪರಿಕರಗಳನ್ನು ಮಾರಾಟ ಮಾಡಲು ಪಾಲಿಕೆ ವತಿಯಿಂದ ಸಹಾಯಧನ ನೀಡಬೇಕೆಂಬ ಅಹವಾಲುಗಳನ್ನು ಸಭೆ ಮುಂದಿಟ್ಟರು.
ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್ ಅವರು, ನಗರದ ನಾಲ್ಕು ದಿಕ್ಕುಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸ ಬೇಕು. ಬೀದಿ ದೀಪ ನಿರ್ವಹಣೆ, ನೀರು ಸರಬರಾಜು, ನಗರ ಸ್ವಚ್ಛತೆ ಪ್ರಮುಖ ಆದ್ಯತೆಯಾಗಬೇಕು. ಅಗತ್ಯತೆಗೆ ಅನುಗುಣ ವಾಗಿ ಪೌರ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ. ಬಾವಿ ಅವರು, ಹೆಚ್ಚುತ್ತಿರುವ ಜನಸಂಖ್ಯೆ, ವಾರ್ಡ್ ಗಳನ್ನು ಗಮನದಲ್ಲಿಟ್ಟುಕೊಂಡು ದಾವಣಗೆರೆ ಬೃಹತ್ ಮಹಾನಗರ ಪಾಲಿಕೆಯಾಗುವ ನಿಟ್ಟಿನಲ್ಲಿ ಗಮನಹರಿಸಬೇಕು ಎಂದರು.
ನಗರದಲ್ಲಿರುವ ಬಡ ಪತ್ರಕರ್ತರಿಗೆ ಪಾಲಿಕೆ ಅನುದಾನದಲ್ಲಿ ಮೀಡಿಯಾ ಕಿಟ್ ವಿತರಿಸಬೇಕು, ಪತ್ರಕರ್ತರ ಭವನ ನಿರ್ಮಾಣಕ್ಕೆ ಮುಂದಾಗಬೇಕು. ಹಿಂದುಳಿದ ಪ್ರದೇಶಗಳಲ್ಲಿರುವ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಾಲಿಕೆಯಿಂದ ಉಚಿತವಾಗಿ ನೋಟ್ ಬುಕ್, ಬ್ಯಾಗ್ ವಿತರಿಸುವಂತೆ ಸಲಹೆ ನೀಡಿದರು.
ಲೆಕ್ಕಪರಿಶೋಧಕ ಜಂಬಿಗಿ ರಾಧೇಶ್ ಅವರು, ಕಟ್ಟಡ ಪರವಾನಿಗೆ ಶುಲ್ಕ ಹೆಚ್ಚಳ, ಖಾಲಿ ನಿವೇಶನದಲ್ಲಿ ಕಸ ಹಾಕುವವರಿಗೆ ದಂಡ ವಿಧಿಸುವುದು, ಸಾರ್ವಜನಿಕ ಮಾರುಕಟ್ಟೆ, ಪಾಲಿಕೆ ವ್ಯಾಪ್ತಿಯ ಮಳಿಗೆಗಳ ಬಾಡಿಗೆ ಹೆಚ್ಚಿಸುವುದು, ಪಾಲಿ ಕ್ಲಿನಿಕ್ಗಳಿಗೆ ತೆರಿಗೆ ವಿಧಿಸುವುದು ಸೇರಿದಂತೆ ಇತರೆ ತೆರಿಗೆ ವಿಧಿಸುವ ಮೂಲಕ ಪಾಲಿಕೆ ಆದಾಯ ಹೆಚ್ಚು ಮಾಡಿಕೊಳ್ಳಲು ಸಲಹೆ ನೀಡಿದರು.
ಪತ್ರಕರ್ತರಾದ ಸುರೇಶ್ ಕುಣಿಬೆಳಕೆರೆ, ರವಿ ಅವರು ಎಸ್ಸಿ, ಎಸ್ಟಿ ಪತ್ರಕರ್ತರಿಗೆ ಮೀಡಿಯಾ ಕಿಟ್ ವಿತರಿಸುವಂತೆ ಪಾಲಿಕೆಯ ಮೇಯರ್ ಗೆ ಮನವಿ ಮಾಡಿದರು.
ಸ್ಫೂರ್ತಿ ಸಂಸ್ಥೆ ರೂಪಾನಾಯ್ಕ, ಹಾಲೇಶ್, ಉದಯಕುಮಾರ್, ಮಲ್ಲಿಕಾರ್ಜುನ್ ಇಂಗಳೇಶ್ವರ ಮುಂತಾದವರು ಸಲಹೆಗಳನ್ನು ನೀಡಿದರು.
ಆಯುಕ್ತ ವಿಶ್ವನಾಥ ಪಿ.ಮುದಜ್ಜಿ, ಸ್ಥಾಯಿ ಸಮಿತಿ ಸದಸ್ಯರಾದ ಉಮಾ ಪ್ರಕಾಶ್, ರೇಣುಕಾ ಶ್ರೀನಿವಾಸ್, ಗೀತಾ ದಿಳ್ಳೆಪ್ಪ, ಎಲ್.ಡಿ. ಗೋಣೆಪ್ಪ ಮತ್ತಿತರರರು ಉಪಸ್ಥಿತರಿದ್ದರು.