ಹರಪನಹಳ್ಳಿ : ನಿವೃತ್ತ ಯೋಧರೂ, ಶಿಕ್ಷಕರೂ ಆದ ಕರಿಬಸಪ್ಪ ಚಿಕ್ಕಬಾಸೂರು ಕರೆ
ಹರಪನಹಳ್ಳಿ, ಫೆ.2- ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕಲಿಕಾರ್ಥಿಗಳಾಗಿ ದೇಶ ಮುನ್ನಡೆಸುವ ಸಾಮರ್ಥ್ಯ, ಚಿಂತನೆ ಮೈಗೂಡಿಸಿಕೊಳ್ಳುವಂತೆ ನಿವೃತ್ತ ಯೋಧರೂ, ಶಿಕ್ಷಕರೂ ಆದ ಕರಿಬಸಪ್ಪ ಚಿಕ್ಕಬಾಸೂರು ಕರೆ ನೀಡಿದರು.
ತಾಲ್ಲೂಕಿನ ಕೆ. ಕಲ್ಲಹಳ್ಳಿಯ ಎ.ಬಿ. ಮಲ್ಲಪ್ಪ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಭಾರತೀಯ ಸೇನೆ ಯಲ್ಲಿ ಸೇವೆ ಸಲ್ಲಿಸುತ್ತಿರುವ ಹಾಲಿ ಮತ್ತು ನಿವೃತ್ತ ಯೋಧರ ಅಭಿನಂದನಾ ಸಮಾರಂಭ ದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ದೇಶಾಭಿಮಾನ ಮತ್ತು ರಾಷ್ಟ್ರಪ್ರೇಮ ಬೆಳೆಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗುವಂತೆ ಹಿತ ನುಡಿದರು.
ಮತ್ತೊಬ್ಬ ಯೋಧ, ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಸಂಸ್ಥೆಯಲ್ಲಿ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಂಜಿನಪ್ಪ ಅಂಗೂರ ಮಾತನಾಡಿ, ದೇಶ ಸೇವೆ ಮಾಡುವ ಅದಮ್ಯ ಬಯಕೆ ಹೊಂದಿರುವ ವಿದ್ಯಾರ್ಥಿಗಳು ಸೇನಾ ನೇಮಕಾತಿಯಲ್ಲಿ ಆಯ್ಕೆ ಪ್ರಕ್ರಿಯೆಗಳು ಹೇಗಿರುತ್ತವೆ, ವಿದ್ಯಾರ್ಥಿಗಳು ಯಾವ ರೀತಿ ಭಾಗವಹಿಸಬೇಕು ಮತ್ತು ಸೇವಾ ನಿಯಮಗಳು ಹೇಗಿರುತ್ತವೆ ಎಂಬುವುದರ ಕುರಿತು ಸಮಗ್ರ ವಿಷಯಗಳನ್ನು ವಿದ್ಯಾರ್ಥಿಗಳ ಜೊತೆ ಹಂಚಿಕೊಂಡರು.
ಇನ್ನೋರ್ವ ಯೋಧ ಡಿ. ಮಂಜುನಾಥ್ ಮಾತನಾಡಿ, ದೇಶ ಸೇವೆಯೇ ಈಶ ಸೇವೆ ಎಂಬಂತೆ ಭಾರತೀಯರಾದ ನಾವುಗಳು ದೇಶಕ್ಕಾಗಿ ದುಡಿಯುವ ಅವಕಾಶ ಸಿಕ್ಕರೆ ಅದೇ ನಮ್ಮ ಪವಿತ್ರ ಕಾರ್ಯ ಎಂದು ತಿಳಿದು ಸೇವೆ ಸಲ್ಲಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕರವೇ ವಿಜಯನಗರ ಜಿಲ್ಲಾ ಸಂಚಾಲಕ ಟಿ. ನಂದೀಶ್ ಮಾತನಾಡಿದರು. ಶಿಕ್ಷಕ ಎಸ್.ವೀರೇಶ್ ನಿರೂಪಿಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ಕಸ್ತೂರಪ್ಪ, ಮುಖ್ಯ ಶಿಕ್ಷಕ ಕೆ. ಉಮಾಪತಿ, ಸಹ ಶಿಕ್ಷಕರಾದ ಬಿ. ಸತೀಶ್, ಕೆ. ಸಲಾಂಸಾಬ್, ಟಿ. ಹೊನ್ನಪ್ಪ, ಕೊಟ್ರೇಶ್, ವೀರಪ್ಪ, ಎಸ್. ಅಂಜಿನಪ್ಪ, ಕಲ್ಲಹಳ್ಳಿ ದೇವಸ್ಥಾನ ಕಮಿಟಿ ಅಧ್ಯಕ್ಷ ಹಾಲೇಶ್, ಪುಟ್ಟನಗೌಡ ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.