ಹುತಾತ್ಮ ದಿನ : ಸ್ಕೌಟ್ಸ್, ಗೈಡ್ಸ್ ಮಕ್ಕಳಿಂದ ಸರ್ವಧರ್ಮ ಪ್ರಾರ್ಥನೆ

ದಾವಣಗೆರೆ, ಫೆ. 2- ಬರೀ ದೇಶಕ್ಕೆ ಅಷ್ಟೇ ಅಲ್ಲದೇ ಇಡೀ ವಿಶ್ವಕ್ಕೇ ರಾಷ್ಟ್ರಪಿತ ಎನಿಸಿಕೊಂಡ ವರು ಮಹಾತ್ಮಾ ಗಾಂಧೀಜಿ ಎಂದು ಸ್ಕೌಟ್ ಮಾಸ್ಟರ್ ಟಿ.ಎಂ. ರವೀಂದ್ರಸ್ವಾಮಿ ತಿಳಿಸಿದರು.

ವಿದ್ಯಾನಗರ ಮೊದಲ ಬಸ್ ಸ್ಟಾಪ್ ಬಳಿ ಇರುವ ಮಹಾತ್ಮಾ ಗಾಂಧಿ ಪ್ರತಿಮೆ ಬಳಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕದ ಕೊಂಡಜ್ಜಿ ಬಸಪ್ಪ ಸ್ಥಳೀಯ ಸಂಸ್ಥೆಯಿಂದ ಭಾನುವಾರ ಗಾಂಧಿ ಹುತಾತ್ಮರಾದ ದಿನದ ಅಂಗವಾಗಿ  ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿ ಪ್ರತಿಮೆಗೆ ಪುಷ್ಪಾರ್ಚನೆ ಹಾಗೂ ಮೇಣದ ಬತ್ತಿ ಬೆಳಗುವ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಈ ದಿನವನ್ನು ಸರ್ವೋದಯ ದಿನವನ್ನಾಗಿ ಕೂಡ ಆಚರಿಸಲಾಗುತ್ತಿದೆ. ಮಹಾತ್ಮಾ ಗಾಂಧೀಜಿ ದೇಶಕ್ಕೆ ಒಂದು ವರ ಇದ್ದಂತೆ, ತಮ್ಮ ಶಾಂತಿಯ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ತರಲು ಹೋರಾಟ ನಡೆಸಿ ಹುತಾತ್ಮರಾದರು. ಅವರೊಂದಿಗೆ ಅನೇಕ ದಾರ್ಶನಿಕರು ನಮಗೆ ಬ್ರಿಟೀಷರಿಂದ ಸ್ವಾತಂತ್ರ್ಯ ಪಡೆದುಕೊಳ್ಳುವ ಸಲುವಾಗಿ ಅನೇಕ ಹೋರಾಟಗಳನ್ನು ಮಾಡಿ ತಮ್ಮ ಜೀವವನ್ನು ತ್ಯಾಗ ಮಾಡಿದ್ದಾರೆ. ಅಂತಹ ಮಹಾನ್ ಪುರುಷರ ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸ್ಕೌಟ್ ಶಿಕ್ಷಕರಾದ ವಿಜಯಕುಮಾರ, ಕೆ.ವಿ. ಸಿದ್ದೇಶ, ಶಶಿಕುಮಾರ, ಹಾಗೂ ತರಳಬಾಳು ವಸತಿ ಶಾಲೆ, ಮಾಗನೂರು ಬಸಪ್ಪ ಶಾಲೆ, ಅನ್‍ಮೋಲ್ ಪಬ್ಲಿಕ್ ಶಾಲೆ, ಬಾಪೂಜಿ ಓಪನ್ ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು, ಮದರ್ ಥೆರೆಸಾ ಓಪನ್ ಗೈಡ್ ಕಂಪನಿ ಮಕ್ಕಳು ಭಾಗವಹಿಸಿ ಗಾಂಧೀಜಿಯವರನ್ನು ಸ್ಮರಿಸಿದರು.

error: Content is protected !!