60ರ ಸಂಭ್ರಮದಲ್ಲಿ ದಾವಣಗೆರೆ ಅರ್ಬನ್ ಬ್ಯಾಂಕ್

ದಾವಣಗೆರೆ, ಫೆ. 1- ದಾವಣಗೆರೆ ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಗಳಲ್ಲೊಂದಾದ ನಗರದ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನ ಸ್ಥಾಪನೆಯ 60ನೇ ವರ್ಷಾಚರಣೆ ಯಲ್ಲಿ ಸಂಭ್ರಮಿಸುತ್ತಿದೆ.

ಈ ಸಂಬಂಧ ಬ್ಯಾಂಕ್ ಸಭಾಂಗಣದಲ್ಲಿ ಇಂದು ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಹಿರಿಯ ಕೈಗಾರಿಕೋದ್ಯಮಿಯೂ ಆಗಿರುವ ಬ್ಯಾಂಕ್ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರು, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗದವರ ಚಪ್ಪಾಳೆಗಳ ಮಧ್ಯೆ ಜ್ಯೋತಿಯನ್ನು ಪ್ರಜ್ವಲಿಸುವುದರೊಂದಿಗೆ ಕೇಕ್ ಕತ್ತರಿಸಿದರು. 

ನಂತರ ಆಶಯ ನುಡಿಗಳನ್ನಾಡಿದ ಬಕ್ಕೇಶಪ್ಪ, ಮಧ್ಯ ಕರ್ನಾಟಕದಲ್ಲಿ ಸ್ಥಾಪನೆಗೊಂಡ ಪ್ರಪ್ರಥಮ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ತನ್ನದೇ ಆದ ವಿಶಿಷ್ಟತೆಯನ್ನು ಇಟ್ಟುಕೊಳ್ಳುವುದರ ಮೂಲಕ ಮಾದರಿ ಬ್ಯಾಂಕ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಜಿಲ್ಲೆಯ ಸಹಕಾರಿ ಬ್ಯಾಂಕ್ ಗಳಲ್ಲೇ ಅತೀ ಹೆಚ್ಚು – ಹೆಚ್ಚು ಲಾಭವನ್ನು ಗಳಿಸುವುದರ ಜೊತೆ-ಜೊತೆಗೆ ಬ್ಯಾಂಕಿಗೆ ಬೆನ್ನೆಲುಬಾಗಿರುವ ಸಾಲ ಪಡೆದ ಗ್ರಾಹಕರು, ಷೇರುದಾರರು, ಠೇವಣಿದಾರರು, ಸಿಬ್ಬಂದಿ ವರ್ಗದವರ ಹಿತವನ್ನು ಕಾಯ್ದುಕೊಂಡು ಮುನ್ನಡೆದಿರುವ ಬ್ಯಾಂಕ್ ಇದಾಗಿದೆ ಎಂದು ಬಕ್ಕೇಶಪ್ಪ ತಿಳಿಸಿದರು. 

ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ ಮಾತನಾಡಿ, ಈ ಬ್ಯಾಂಕಿನ ಪ್ರಗತಿಗೆ ಕಾರಣರಾದ ಷೇರುದಾರರು, ಠೇವಣಿದಾರರು ಮತ್ತು ಗ್ರಾಹಕರ ಸಹಕಾರವನ್ನು ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು. 

ಜವಳಿ ಉದ್ಯಮಿಯೂ ಆದ ಹಿರಿಯ ನಿರ್ದೇಶಕ ಬಿ.ಸಿ. ಉಮಾಪತಿ ಮಾತನಾಡಿ, ಈ ಬ್ಯಾಂಕ್ ಹುಟ್ಟುಹಾಕಿದ ಸಂಸ್ಥಾಪಕರ ಧ್ಯೇಯಗ ಳನ್ನು ಪ್ರಾಮಾಣಿಕವಾಗಿ ಈಡೇರಿಸುವಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿಯೇ ಇದೀಗ 60ನೇ ವರ್ಷಾಚರಣೆ ಯಲ್ಲಿ ಮುನ್ನಡೆದಿದೆ ಎಂದು ಹೇಳಿದರು.

ಮತ್ತೋರ್ವ ಹಿರಿಯ ನಿರ್ದೇಶಕರೂ ಆದ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಾಡಿನಲ್ಲೇ ಹೆಸರು ಮಾಡಿರುವ ಕೆಲವೇ ಸಹಕಾರಿ ಬ್ಯಾಂಕುಗಳಲ್ಲಿ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಕೂಡಾ ಒಂದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೋರ್ವ ಹಿರಿಯ ನಿರ್ದೇಶಕರೂ ಆದ ಬ್ಯಾಂಕಿನ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್ ಮಾತನಾಡಿ, ಅನೇಕ ಅಡೆ-ತಡೆಗಳ ನಡುವೆಯೂ ಈ ಬ್ಯಾಂಕ್ ವಿಶಿಷ್ಟ ಸೇವೆಯಿಂದಾಗಿ ತನ್ನ ಪ್ರತಿಷ್ಠೆ ಮತ್ತು ಮಾದರಿಯನ್ನು ಹೆಚ್ಚಿಸಿಕೊಳ್ಳುತ್ತಿದೆ ಎಂದು ಶ್ಲ್ಯಾಘಿಸಿದರು.

ನಿರ್ದೇಶಕರುಗಳಾದ ಮತ್ತಿಹಳ್ಳಿ ವೀರಣ್ಣ, ಪಲ್ಲಾಗಟ್ಟೆ ಶಿವಾನಂದಪ್ಪ, ಎಂ. ಚಂದ್ರಶೇಖರ್, ಅಜ್ಜಂಪುರ ಶೆಟ್ರು ವಿಜಯಕುಮಾರ್, ಕಂಚಿಕೆರೆ ಮಹೇಶ್, ಶ್ರೀಮತಿ ಸುರೇಖಾ ಎಂ. ಚಿಗಟೇರಿ, ಶ್ರೀಮತಿ ಅರ್ಚನಾ ಡಾ. ರುದ್ರಮುನಿ, ಪ್ರಧಾನ ವ್ಯವಸ್ಥಾಪಕ ಡಿ.ವಿ. ಆರಾಧ್ಯಮಠ ಅವರುಗಳು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ ಡಿ.ಇ. ಸಿಂಧು ಅವರ ಪ್ರಾರ್ಥನೆ ನಂತರ ನಿರ್ದೇಶಕ ನಲ್ಲೂರು ರಾಘವೇಂದ್ರ ಸ್ವಾಗತಿಸಿದರು. ನಿರ್ದೇಶಕ ವಿ.  ವಿಕ್ರಮ್ ವಂದಿಸಿದರು. ನಿರ್ದೇಶಕ ಇ.ಎಂ. ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು.

error: Content is protected !!