ಸತ್ಸಂಗ ಶಾಂತಿ, ನೆಮ್ಮದಿಯ ಜೊತೆಗೆ ಸಂಸ್ಕಾರ ಕಲಿಸುತ್ತದೆ

ಯಲವಟ್ಟಿ ಶ್ರೀ ಗುರು ಸಿದ್ಧಾಶ್ರಮದ ಯೋಗಾನಂದ ಸ್ವಾಮೀಜಿ ಅಭಿಮತ

ಮಲೇಬೆನ್ನೂರು, ಫೆ.1- ಸೈನಿಕರು ಮತ್ತು ರೈತರು ನಮ್ಮ ದೇಶದ ಎರಡು ಕಣ್ಣುಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಯಲವಟ್ಟಿ ಗ್ರಾಮದ ಶ್ರೀ ಗುರು ಸಿದ್ಧಾಶ್ರಮದಲ್ಲಿ ಅವರಾತ್ರಿ ಅಮವಾಸ್ಯೆ ಪ್ರಯುಕ್ತ ಇಂದು ಹಮ್ಮಿಕೊಂಡಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಸಾರಥಿ ಗ್ರಾಮದ ನಿವೃತ್ತ ಯೋಧ ಸಿ.ಎಸ್.ಬಸವರಾಜ್ ಅವರನ್ನು ಸನ್ಮಾನಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಸೈನಿಕರ ಶ್ರಮದಿಂದಾಗಿ ದೇಶದ ಜನ ನೆಮ್ಮದಿಯಾಗಿದ್ದರೆ, ರೈತರ ಶ್ರಮದಿಂದಾಗಿ ದೇಶದ ಜನ ಅನ್ನ ಊಟ ಮಾಡುತ್ತಿದ್ದಾರೆ. ಗುರುಗಳಿಂದಾಗಿ ಜನರು ಶಿಕ್ಷಣ, ಸಂಸ್ಕಾರ ಕಲಿತು ಉತ್ತಮ ಜೀವನ ನಡೆಸುತ್ತಿದ್ದಾರೆ. ಸತ್ಸಂಗ ಮನುಷ್ಯ ಜೀವನಕ್ಕೆ ಶಾಂತಿ,
ನೆಮ್ಮದಿ ನೀಡುವ ಜೊತೆಗೆ ಸಂಸ್ಕಾರವನ್ನು ಕಲಿಸುತ್ತದೆ ಎಂದು ಶ್ರೀ ಯೋಗಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.

ದಾಗಿನಕಟ್ಟೆಯ ಶ್ರೀ ಸಿದ್ಧಾರೂಢ ಆಶ್ರಮದ ಶ್ರೀ ಕೃಷ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿ, ಬದುಕಿನಲ್ಲಿ ಯಾವುದೂ ಸ್ಥಿರವಲ್ಲ. ದೇಶದ ಹೋದರೂ ನಾವು ಮಾಡಿದ ಪುಣ್ಯದ ಕೆಲಸಗಳು, ಸಾಧನೆಗಳು ಮಾತ್ರ ಸ್ಥಿರವಾಗಿರುತ್ತವೆ. ಮಕ್ಕಳನ್ನು ಸುಖವಾಗಿ ಬೆಳೆಸಿದರೆ ನಾಳೆ ಅವರ ದುಃಖಕ್ಕೆ ನೀವೇ ಕಾರಣರಾಗುತ್ತೀರಿ. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ಜೀವನದ ಕಷ್ಟಗಳನ್ನು ತಿಳಿಸಿಕೊಡಿ ಎಂದು ಕಿವಿ ಮಾತು ಹೇಳಿದರು.

ಮಾಸೂರಿನ ಶ್ರೀಮತಿ ಎಸ್.ಬಿ.ಪಾಟೀಲ್ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಕರೇಗೌಡ ಕೋಣ್ತಿ ಮಾತನಾಡಿ,  ಮನುಷ್ಯ ಹುಟ್ಟಿದ ಮೇಲೆ ಸಮಾಜಕ್ಕೆ ನಮ್ಮ ಕುರುಹು ಬಿಟ್ಟು ಹೋಗುವಂತೆ ಬದುಕಬೇಕು ಎಂದರು.

ಸನ್ಮಾನಿತರಾದ ನಿವೃತ್ತ ಯೋಧ ಸಾರಥಿ ಗ್ರಾಮದ ಬಸವರಾಜ್ ಮಾತನಾಡಿ,  ದೇಶ ಸೇವೆ ಮಾಡುವ ಅವಕಾಶವನ್ನು ಯಾರೂ ಕಳೆದುಕೊಳ್ಳಬೇಡಿ. ದೇಶ ಸೇವೆ ಮಾಡುವಾಗ ಕಷ್ಣವಾದರೂ ನಂತರ ಸಿಗುವ ಖುಷಿ, ತೃಪ್ತಿ ಬೇರೆ ಯಾವ ಸೇವೆಯಲ್ಲೂ ಸಿಗಲಾರದು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಗ್ರಾಮದ ನಿವೃತ್ತ ಶಿಕ್ಷಕ ಜಿ.ಬಸಪ್ಪ, ಜಿ.ಆಂಜನೇಯ, ಡಿ.ರಾಜಪ್ಪ, ಹೊಸಮನಿ ಮಲ್ಲಪ್ಪ, ಬಸವನಗೌಡ ಕೋಣ್ತಿ, ಕುಂಬಳೂ ರಿನ ಕೆ.ಕುಬೇರಪ್ಪ, ಸದಾಶಿವ, ಸಿರಿಗೆರೆಯ ಹನುಮಂತಗೌಡ ಮತ್ತಿತರರು ಭಾಗವಹಿಸಿದ್ದರು.

ಹೊಳೆಸಿರಿಗೆರೆಯ ಭದ್ರಾ ಪಿಎಸಿಎಸ್‌ ಸಿಇಓ ಎಂ.ಮಲ್ಲೇಶಪ್ಪ ದಾಸೋಹ ದಾನಿಗಳಾಗಿದ್ದರು. ಹೊಳೆಸಿರಿಗೆರೆಯ ಕುಂದೂರು ಮಂಜಪ್ಪ ಅವರು ನಿವೃತ್ತ ಯೋಧರ ಪರಿಚಯ ಮಾಡಿಕೊಟ್ಟರು. 

ಸಿರಿಗೆರೆ ಸಿದ್ದೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸಿಎಸ್ ಸಿಇಓ ಶೇಖರಪ್ಪ ಸ್ವಾಗತಿಸಿದರು.

error: Content is protected !!