ವಿದ್ಯಾರ್ಥಿ ಬಸ್‍ಪಾಸ್ ನಿರಾಕರಣೆ : ದಿಢೀರ್ ಪ್ರತಿಭಟನೆ

ಹರಪನಹಳ್ಳಿಯಲ್ಲಿ ಎಐಎಸ್‌ಎಫ್ ಮತ್ತು ಎಐವೈಎಫ್ ಆಕ್ರೋಶ

ಹರಪನಹಳ್ಳಿ, ಜ.31- ತಾಲ್ಲೂಕಿನ ಕಂಚಿಕೆರೆ ಮಾರ್ಗವಾಗಿ ಸಂಚರಿಸುವ ದಾವಣಗೆರೆ- ಹರಪನಹಳ್ಳಿ ತಡೆ ರಹಿತ ಸಾರಿಗೆ ನಿಗಮದ ಬಸ್‍ಗಳಲ್ಲಿ, ವಿದ್ಯಾರ್ಥಿಗಳ ರಿಯಾ ಯಿತಿ ದರದ ಬಸ್‍ಪಾಸ್ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ವಿದ್ಯಾರ್ಥಿಗಳು, ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ವಿರುದ್ಧ, ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್‍ಎಫ್) ಹಾಗೂ ಅಖಿಲ ಭಾರತ ಯುವಜನ ಫೆಡರೇಷನ್ (ಎಐವೈಎಫ್) ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ಪಟ್ಟಣದ ಬಸ್‍ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು.

ಎಐವೈಎಫ್ ರಾಜ್ಯಘಟಕದ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಮಾತನಾಡಿ, ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ವಿದ್ಯಾರ್ಥಿಗಳು, ಸರ್ಕಾರದ ಮಾರ್ಗಸೂಚಿ ಹಾಗೂ ಮಾನದಂಡದ ಪ್ರಕಾರವೇ ಕಾನೂನುಬದ್ಧವಾಗಿ, ಮುಂಗಡ ವಾರ್ಷಿಕ ಅವಧಿಯ ಹಣ ಪಾವತಿಸುವ ಮೂಲಕ ರಿಯಾಯಿತಿ ದರದ ಬಸ್‍ಪಾಸ್ ಪಡೆದು, ಆ ಮೂಲಕ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣಕ್ಕಾಗಿ ನಿತ್ಯವೂ ಸಂಚರಿಸುತ್ತಿದ್ದಾರೆ. ಆದರೆ, ಇತ್ತೀಚೆಗೆ ದಾವಣಗೆರೆ- ಹರಪನಹಳ್ಳಿ ತಡೆರಹಿತ ಸಂಚಾರದ ನೆಪದಲ್ಲಿ ವಿದ್ಯಾರ್ಥಿಗಳ ಬಸ್‍ಪಾಸ್‍ಗಳನ್ನು ನಿರ್ವಾಹಕರು ನಿರಾಕರಿಸುತ್ತಿದ್ದಾರೆ ಎಂದರು.

ಕೇಳಿದರೆ, ಮೇಲಾಧಿಕಾರಿಗಳ ಆದೇಶವನ್ನಷ್ಟೇ ನಾವು ಪಾಲಿಸಬೇಕಾಗುತ್ತದೆ ಎಂಬ ಸಬೂಬು ಹೇಳುತ್ತಾರೆ. ದಾವಣಗೆರೆ ವಿಭಾಗದ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮನಸೋಇಚ್ಛೆ ನಿಯಮಗಳನ್ನು ರೂಪಿಸುವ ಮೂಲಕ ಹಿಂದುಳಿದ ತಾಲ್ಲೂಕಿನ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಹಕ್ಕನ್ನು ಹೊಸಕಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಎಐಎಸ್‍ಎಫ್ ರಾಜ್ಯ ಘಟಕದ ಕಾರ್ಯದರ್ಶಿ ರಮೇಶ ನಾಯ್ಕ್ ಮಾತನಾಡಿ, ನಿಗಮದ ಅಧಿಕಾರಿಗಳು ಬಸ್‍ಪಾಸ್ ವಿತರಿಸುವ ಮುನ್ನ, ಅಂತರ್‍ರಾಜ್ಯ ಸಾರಿಗೆ, ಪುಷ್ಪಕ್ ಹಾಗೂ ರಾಜಹಂಸದಂತಹ ಹವಾ ನಿಯಂತ್ರಿತ ಬಸ್‍ಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಸಾರಿಗೆ ನಿಗಮದ ಬಸ್‍ಗಳಲ್ಲಿ ಸಂಚರಿಸಬಹುದು ಎಂದು ಪಾಸಿನ ಮೇಲೆ ಮುದ್ರಿಸಿರುತ್ತಾರೆ. ಆದರೆ, ಕಂಚಿಕೆರೆ ಮಾರ್ಗವಾಗಿ ಸಂಚರಿಸುವ ತಡೆರಹಿತ ಹೆಸರಿನ ಸಾರಿಗೆ ನಿಗಮದ ಬಸ್‍ಗಳಲ್ಲಿ ಬಸ್‍ಪಾಸ್ ನಿರಾಕರಿಸಲಾಗುತ್ತಿದೆ. ಇದು ಇಲಾಖೆಯ ಅಧಿಕಾರಿಗಳ ತುಘಲಕ್ ನೀತಿ  ಪ್ರದರ್ಶಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ಕಂಚಿಕೆರೆ ಮಾರ್ಗವಾಗಿ ಸಂಚರಿಸುವ ಸಾರಿಗೆ ನಿಗಮದ ಎಲ್ಲಾ ಬಸ್‍ಗಳಲ್ಲಿಯೂ ರಿಯಾಯಿತಿ ದರದ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಫೆಬ್ರವರಿ 1ರಂದು ಎಲ್ಲಾ ಬಸ್‍ಗಳ ಸಂಚಾರಕ್ಕೆ ತಡೆಯೊಡ್ಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಉಭಯ ಮುಖಂಡರು ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಸಂಘಟನೆಯ ತಾಲ್ಲೂಕು ಸಂಚಾಲಕ ದೊಡ್ಡಬಸಪ್ಪ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಾದ ಮಂಜುನಾಥ, ಇಸ್ಮಾಯಿಲ್, ಜಬೀವುಲ್ಲಾ, ಅಶ್ವಿನಿ, ಹನುಮಂತಪ್ಪ, ಮಂಜುನಾಥ, ಆಫ್ರೀನ್, ಸುಷ್ಮಿತಾ ಎಚ್.ಎಂ., ಆಕಾಶ್, ರವಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!