28ರಂದು ಐತಿಹಾಸಿಕ ಚಳವಳಿಗೆ ನಾಂದಿ

ರಾಣೇಬೆನ್ನೂರು: ಶರಣ ಬಸವೇಶ್ವರ ಮಠದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ

ರಾಣೇಬೆನ್ನೂರು, ಜ. 31- ರಾಣೇಬೆನ್ನೂರು-ದೇವರಗುಡ್ಡ ರಸ್ತೆಗೆ ಹೊಂದಿಕೊಂಡಿರುವ ರೈಲ್ವೆ ಗೇಟ್ ನಂ. 219 ಕ್ಕೆ ರೈಲ್ವೆ ಮೇಲ್ಸೇತುವೆ  ನಿರ್ಮಾಣ ನಮ್ಮೆಲ್ಲರ ಹಕ್ಕು. ಫೆಬ್ರವರಿ 28 ರ ರೈಲು ರೋಖೋ ಮತ್ತು ರಾಣೇಬೆನ್ನೂರು ಬಂದ್ ಚಳವಳಿಯಲ್ಲಿ ತಾಲ್ಲೂಕಿನ ಎಲ್ಲಾ ಮಠಾಧೀಶರು ಅಭಿಮಾನದಿಂದ ಭಾಗವಹಿಸುವ ಮೂಲಕ ಐತಿಹಾಸಿಕ ಚಳುವಳಿಗೆ ನಾಂದಿ ಹಾಡುತ್ತೇವೆ ಎಂದು ಅರೆಮಲ್ಲಾಪುರ ಗ್ರಾಮದ  ಶರಣ ಬಸವೇಶ್ವರ ಮಠದ ಶ್ರೀ ಪ್ರಣವಾನಂದ ಸ್ವಾಮೀಜಿ ಹೇಳಿದರು. 

ನಗರದ ಸ್ಟೇಷನ್ ರಸ್ತೆಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ರೈಲ್ವೇ ಮೇಲ್ಸೇತುವೆ ನಿರ್ಮಾಣ ಸಂಬಂಧ  ಇದೇ ದಿನಾಂಕ 28 ರ ರಾಣೇಬೆನ್ನೂರು ಬಂದ್ ಮತ್ತು ರೈಲು ರೋಖೋ ಸಂಬಂಧ ಕರೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹೋರಾಟವನ್ನು ಚುರುಕುಗೊಳಿಸೋಣ ಭಕ್ತರ ಜೊತೆ ತಾಲ್ಲೂಕಿನ ನಾವೆಲ್ಲ ಮಠಾಧೀಶರು ಜೊತೆಗೆ ಇರುತ್ತೇವೆ ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರವೀಂದ್ರಗೌಡ ಎಫ್. ಪಾಟೀಲ, ಅಂದು ಈ  ಭಾಗದ ಸಂಸದ  ಶಿವಕುಮಾರ ಸಿ. ಉದಾಸಿಯವರು ಮತ್ತು ಜಿಲ್ಲಾಧಿಕಾರಿಗಳು ಹಾಗೂ ರೈಲ್ವೇ ಇಲಾಖೆಯ ಮುಖ್ಯಸ್ಥರು ಖುದ್ದಾಗಿ ಬಂದು ಮನವಿ ಸ್ವೀಕರಿಸದಿದ್ದರೆ,  ಚಳವಳಿಗೂ ಮೊದಲು ಯೋಜನೆಯನ್ನು ಜಾರಿಗೊ ಳಿಸದಿದ್ದರೆ ಅಂದು ಸಾರ್ವಜನಿಕರೆಲ್ಲರ ಪರವಾಗಿ ಈ ಮೇಲಿನ ಗಣ್ಯರ ಮೇಲೆ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದೆಂದು ಹೇಳಿದರು. 

ನಗರದ ಸರ್ವಾಂಗೀಣ ಅಭಿವೃದ್ಧಿಗೆ ದೂರ ದೃಷ್ಟಿಯ ಹೋರಾಟದ ಅಗತ್ಯವಿದೆ. ಸಂಸದ ಎಸ್.ಸಿ. ಉದಾಸಿ ಅವರು ಯಲವಿಗಿಯಿಂದ ತಮ್ಮೂರು ಹಾನಗಲ್ಲ, ಶಿವಮೊಗ್ಗ ರೈಲು ಮಾರ್ಗಕ್ಕೆ ಪ್ರಯತ್ನ ನಡೆಸಿದ್ದಾರೆ.  ಜನಪ್ರತಿನಿಧಿಯಾದವರು ತಮ್ಮ ಸಂಪೂರ್ಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನಹರಿಸಬೇಕು. ಒಂದೇ ಸೇತುವೆಗಿಂತ ಗಂಗಾಪೂರ ರಸ್ತೆ, ಮೆಡ್ಲೇರಿ ರಸ್ತೆಗಳ ಸೇತುವೆ, ಉಪವಿಭಾಗಾಧಿಕಾರಿ ಕಛೇರಿ, ವರ್ತುಲ ರಸ್ತೆ, ಸುಸಜ್ಜಿತ ಬಸ್ ನಿಲ್ದಾಣ ಇತ್ಯಾದಿಯೊಂದಿಗೆ ನಗರದ ಸರ್ವಾಂಗೀಣ ಅಭಿವೃದ್ಧಿಯ ದೂರದೃಷ್ಟಿಯ ಹೋರಾಟದ ಅವಶ್ಯವಿದೆ  ಎಂಬ ಮಾತುಗಳು ಸಭೆಯಲ್ಲಿ ಕೇಳಿ ಬಂದವು.

ಎಪಿಎಂಸಿ ಅಧ್ಯಕ್ಷ ಬಸವರಾಜ ಸವಣೂರ, ವರ್ತಕರ ಸಂಘದ ಅಧ್ಯಕ್ಷ ಸದಾನಂದ ಉಪ್ಪಿನ, ಅಶೋಕ ಗಂಗನಗೌಡ್ರ, ರವೀಂದ್ರಗೌಡ ಪಾಟೀಲ, ಶಿವಪುತ್ರಪ್ಪ ಮಲ್ಲಾಡದ, ಜಿ.ಜಿ.ಹೊಟ್ಟಿಗೌಡ್ರ, ಪ್ರಭು ಕರ್ಜಗಿಮಠ, ವಕೀಲರಾದ ಎಸ್.ಡಿ. ಹಿರೇಮಠ, ಗುರುಲಿಂಗಪ್ಪಗೌಡ, ಕನ್ನಡ ಸಂಘಟನೆ, ತರಕಾರಿ ವರ್ತಕರ, ಬೆಳ್ಳಿ-ಬಂಗಾರ ವರ್ತಕರ, ಹೋಟೆಲ್‌ ಉದ್ದಿಮೆಗಳ ವರ್ತಕರ ಪ್ರತಿನಿಧಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.

error: Content is protected !!