ಕುಂದವಾಡ ಕೆರೆ ವಾಯು ವಿಹಾರಿಗಳ ಮುಂಜಾನೆ ನಡಿಗೆ

ದಾವಣಗೆರೆ, ಜ.30- ಕುಂದವಾಡ ಕೆರೆ ವಾಯು ವಿಹಾರಿಗಳ ಬಳಗದ ನೇತೃತ್ವದಲ್ಲಿ ಇಂದು ಮುಂಜಾನೆ ಬಳಗದವರು ಸೇರಿದಂತೆ ಮಹಿಳೆಯರು, ಮಕ್ಕಳಾದಿಯಾಗಿ ದಾವಣಗೆರೆಯಿಂದ ಹರಿಹರದವರೆಗೆ ಮಾತಿನೊಂದಿಗೆ ನಡಿಗೆ ನಡೆಸಲಾಯಿತು.

ಬಳಗದ ಸದಸ್ಯರು ಕಳೆದ 20 ವರ್ಷಗಳಿಂದ ಮಾತಿನೊಂದಿಗೆ ನಡಿಗೆ ನಡೆಸುತ್ತಿದ್ದು, ಈ ವರ್ಷವೂ ಸಹ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಹರಿಹರದ ಹರಿಹರೇಶ್ವರ ದೇವಾಲಯದವರೆಗೆ ನಡಿಗೆ ಮಾಡಿದರು. ಬೆಳಗಿನ ಜಾವ 5 ಕ್ಕೆ ಆರಂಭಗೊಂಡ ಕಾಲ್ನೆಡಿಗೆ ಬೆಳಿಗ್ಗೆ 7.30 ರ ಸುಮಾರಿಗೆ ಹರಿಹರ ತಲುಪಿತು.

ಸುಮಾರು 250ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಅದರಲ್ಲಿ ಮಹಿಳೆಯರು, ಮಕ್ಕಳು ಇದ್ದದ್ದು ವಿಶೇಷವಾಗಿತ್ತು. ನಂತರ ಹರಿಹರೇಶ್ವರ ದೇವಸ್ಥಾನದ ಆವರಣದಲ್ಲಿ ಸರಳ ಕಾರ್ಯಕ್ರಮ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ದಂಪತಿ ಭಾಗವಹಿಸಿದ್ದರು.

ನಂತರ ಎಸ್ಪಿ ಸಿ.ಬಿ. ರಿಷ್ಯಂತ್ ಮಾತನಾಡಿ, ಪ್ರಸ್ತುತ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ. ಮುಂಜಾನೆಯ ನಡಿಗೆಯಿಂದ  ಆರೋಗ್ಯಪೂರ್ಣ ಜೀವನ ಎಂಬುದನ್ನು ಅರಿಯಬೇಕಿದೆ. ಮುಂದಿನ ದಿನಗಳಲ್ಲೂ ಇಂತಹ ಆರೋಗ್ಯಕರ ಹವ್ಯಾಸವನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು.

ನಗರ ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್, ಕಾಲ್ನಡಿಗೆ ಜಾಥಾದ ಆಯೋಜ ಕರಾದ ಜೆ. ಈಶ್ವರ್‍ಸಿಂಗ್ ಕವಿತಾಳ್, ಶ್ರೀನಿವಾಸ ದಾಸಕರಿಯಪ್ಪ, ವಕೀಲ ರಾಜಾರಾವ್, ಡಾ. ಪ್ರವೀಣ್ ಅಂಬರ್‌ಕರ್, ಪಿ.ಸಿ. ರಾಮನಾಥ್, ಬಿ.ಎಂ. ಶಿವಕುಮಾರ್, ಗುರುನಾಥ್, ಅನಿಲ್ ಬಾರೆಂಗಳ್, ಮಧುಕೇಶವ, ಸೋಮಶೇಖರ ಬಾಬು, ರಾಜೀವ, ಶ್ರೀಧರ, ಉತ್ಸವ್, ಮುರುಳೀಧರ್ ಮತ್ತು ಇತರರು ಭಾಗವಹಿಸಿದ್ದರು.

error: Content is protected !!