ಬಸವಣ್ಣನವರ ಸಮಾನತೆಯ ಕಲ್ಯಾಣ ರಾಜ್ಯ ಕಟ್ಟಲು ಸಂಕಲ್ಪ

ಮನುವಾದಿಗಳು ದೇವರ ಹೆಸರಿನಲ್ಲಿ ನಡೆಸುತ್ತಿದ್ದ ಬೆತ್ತಲಸೇವೆ, ದೇವದಾಸಿ ಪದ್ಧತಿಯನ್ನು ಅವರಿಗಾಗಿಯೇ ಮಾಡಿಕೊಂಡಿದ್ದರು. ಅದಕ್ಕೆ ಬಲಿಯಾದವರು ಎಸ್ಸಿ-ಎಸ್ಟಿಗಳೇ ಹೆಚ್ಚು. ಇಂತಹ ಅನಿಷ್ಠ ಆಚರಣೆಗಳ ವಿರುದ್ಧದ ನಮ್ಮ ಹೋರಾಟ ಮುಂದುವರಿಯಲಿದೆ.

-ಸತೀಶ್ ಜಾರಕಿಹೊಳಿ, ಕಾರ್ಯಾಧ್ಯಕ್ಷರು, ಕೆಪಿಸಿಸಿ

ಹರಿಹರ, ಜ.30- ಪ್ರಬುದ್ಧ ಹಾಗೂ ಜಾತ್ಯತೀತ ಭಾರತ ಮತ್ತು ಬಸವಣ್ಣನವರ ಸಮಾನತೆಯ ಕಲ್ಯಾಣ ರಾಜ್ಯ ಕಟ್ಟುವುದಕ್ಕಾಗಿ ಸಂಕಲ್ಪ ಮಾಡೋಣ ಎಂದು ಮಾನವ ಬಂಧುತ್ವ ವೇದಿಕೆಯ ಸಂಸ್ಥಾಪಕರೂ, ಕೆಪಿಸಿಸಿ ಕಾರ್ಯಾಧ್ಯಕ್ಷ ಆದ ಶಾಸಕ ಸತೀಶ್‌ ಜಾರಕಿಹೊಳಿ ಪ್ರಬುದ್ಧ ಮನಸುಗಳಿಗೆ ಕರೆ ನೀಡಿದರು.

ಇಲ್ಲಿನ ಬೈಪಾಸ್‌ ಬಳಿ ಇರುವ ಪ್ರೊ. ಬಿ. ಕೃಷ್ಣಪ್ಪ ಸಾಂಸ್ಕೃತಿಕ ಭವನದಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಇಂದು ಹಮ್ಮಿಕೊಂಡಿದ್ದ ಎರಡು ದಿನಗಳ ಬಂಧುತ್ವ ಬಲಪಡಿಸುವ ವಿಭಾಗೀಯ ಸಂಘಟನಾ ಸಮಾವೇಶದ ಸಮಾರೋಪ ಸಮಾರಂಭ ದಲ್ಲಿ ಪಾಲ್ಗೊಂಡು ಮಾತನಾಡಿದರು.

ಬುದ್ಧ, ಬಸವ, ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವ ನಮ್ಮ ವೇದಿಕೆಯಿಂದ ಪ್ರಾರಂಭಿಕವಾಗಿ ಮೌಢ್ಯತೆಯಿಂದ ಜನರನ್ನು ಹೊರತರುವ ಕೆಲಸ ಮಾಡಿ ಅದರ ಫಲಿತಾಂಶವನ್ನೂ ಕಂಡಿದ್ದೇವೆ.

ಇತಿಹಾಸವನ್ನು ಮರೆಮಾಚುವ ಕೆಲಸ ದೇಶವನ್ನು ಲೀಡ್‌ ಮಾಡುತ್ತಿರುವ ವ್ಯಕ್ತಿ ಯಿಂದ ನಡೆಯುತ್ತಿದೆ. ಮಹಾನ್‌ ಪುರುಷರ ತತ್ವ, ಆದರ್ಶ ಹಾಗೂ ಹೋರಾಟಗಳನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವು ದಕ್ಕಾಗಿ ಹೊಸ ನಾಯಕರನ್ನು ನಾವೆಲ್ಲರೂ ತಯಾರು ಮಾಡಬೇಕಿದೆ.

ಮಂತ್ರಿ, ಶಾಸಕ, ಸಂಸದ ಹಾಗೂ ಅಧಿಕಾರಿ ಆಗಿದ್ದರೆ ಮತ್ತು ಆಸ್ತಿ-ಅಂತಸ್ತು, ಕೈಗಾರಿಕೆ ಹೊಂದಿದ್ದರೆ ಅದು ಅಂಬೇಡ್ಕರ್‌ ನೀಡಿದ ಸಂವಿಧಾನದಿಂದಲೇ ಎಂಬುದನ್ನು ಯಾರೂ ಮರೆಯಬಾರದು. ಅಂತಹ ಪವಿತ್ರ ಸಂವಿಧಾನದ ರಕ್ಷಣೆ ಮಾಡುವ ಜವಾಬ್ದಾರಿ ಕೇವಲ ಒಂದೇ ವರ್ಗದ ಮೇಲಿಲ್ಲ, ಆ ಜವಾಬ್ದಾರಿಯನ್ನು ಎಲ್ಲಾ ವರ್ಗಗಳ ಶೋಷಿತರು, ಹಿಂದುಳಿದವರು ತೆಗೆದುಕೊಳ್ಳಬೇಕೆಂದು ಸತೀಶ್‌ ಜಾರಕಿಹೊಳಿ ಕಿವಿಮಾತು ಹೇಳಿದರು.

7 ವರ್ಷಗಳಿಂದ ದೇಶದಲ್ಲಿ ಜಾರಿಗೆ ತಂದ ಹೊಸ ಕಾನೂನುಗಳಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿದೆ, ಜೊತೆಗೆ ಹೊಸ ಶಿಕ್ಷಣ ಹೇಗಿದೆ ಎಂದರೆ ಗುಳಿಗೆಗೆ ಸಕ್ಕರೆ ಪಾಕ ಹಾಕಿ ತಿನ್ನಿಸುವ ಹಾಗಿದೆ ಎಂದು ದೂರಿದ ಅವರು, ಇಂತಹ ಹೊಸ ಸವಾಲುಗಳನ್ನು ಎದುರಿಸಲು ಜನರು ಜಾಗೃತರಾಗಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಕ್ಕಡಗಾತ್ರಿಯ ದೊಡ್ಮನಿ ಅವರ `ಉಕ್ಕಡಗಾತ್ರಿ ಕರಿಬಸಜ್ಜನ ದೆವ್ವಗಳ ಜಾನಪದಿಯ ಅಧ್ಯಯನ’ ಪುಸ್ತಕವನ್ನು ಸತೀಶ್‌ ಜಾರಕಿಹೊಳಿ ಬಿಡುಗಡೆ ಮಾಡಿದರು.

ವೇದಿಕೆಯ ವಿಭಾಗೀಯ ಸಂಚಾಲಕ ಆರ್‌. ಜಯಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಇನ್ನೋರ್ವ ವಿಭಾಗೀಯ ಸಂಚಾಲಕ ಅನಂತನಾಯ್ಕ, ಪ್ರೊ. ಬಿ. ಕೃಷ್ಣಪ್ಪ ಭವನ ಟ್ರಸ್ಟಿ ಹನಗವಾಡಿ ರುದ್ರಪ್ಪ, ಹರಿಹರದ ಪಾರ್ವತಿ, ದಾವಣಗೆರೆಯ ಹನುಮಂತಪ್ಪ ಮತ್ತು ಇತರರು ಮಾತನಾಡಿದರು.

ಶಾಸಕ ಎಸ್‌. ರಾಮಪ್ಪ, ಪ್ರಗತಿಪರ ಚಿಂತಕರಾದ ತೇಜಸ್ವಿ ಪಟೇಲ್‌, ಪ್ರೊ. ಎ.ಬಿ. ರಾಮಚಂದ್ರಪ್ಪ, ಹೆಚ್‌.ಕೆ. ಕೊಟ್ರಪ್ಪ, ಆವರಗೆರೆ ರುದ್ರಮುನಿ, ಎಂ.ಟಿ. ಸುಭಾಷ್‌ಚಂದ್ರ, ಮುಖಂಡರಾದ ಹೊದಿಗೆರೆ ರಮೇಶ್‌, ಕೆ.ಪಿ. ಪಾಲಯ್ಯ, ಬಿ. ವೀರಣ್ಣ, ಎಸ್‌.ಕೆ. ಬಸವಂತಪ್ಪ, ಅಯೂಬ್‌ ಖಾನ್‌, ಸೈಯದ್‌ ಎಜಾಜ್‌, ಎಪಿಎಂಸಿ ಅಧ್ಯಕ್ಷ  ಜಿ. ಮಂಜುನಾಥ್‌ ಪಟೇಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಬಿ. ಅಬೀದ್‌ ಅಲಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ನಿಖಿಲ್‌ ಕೊಂಡಜ್ಜಿ, ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ನಿಟ್ಟೂರು ಸಂಜೀವಮೂರ್ತಿ, ಸಮಾಜಸೇವಕ ನಂದಿಗಾವಿ ಶ್ರೀನಿವಾಸ್‌, ಕೆ.ಪಿ. ಗಂಗಾಧರ್‌, ಎ. ಆರೀಫ್‌ ಅಲಿ, ಸಾಬೀರ್‌ ಜಯಸಿಂಹ, ಕುಂಬಳೂರು ವಾಸು, ಶಿಕ್ಷಕ ಜಿ.ಆರ್‌. ನಾಗರಾಜ್‌, ರಾಘು ದೊಡ್ಮನಿ, ನಿಟುವಳ್ಳಿ ಕರಿಯಪ್ಪ, ಚನ್ನಗಿರಿ ತಾಲ್ಲೂಕು ಕಸಾಪ ಅಧ್ಯಕ್ಷ ಎಲ್‌.ಜಿ. ಮಧುಕುಮಾರ್‌, ಪತ್ರಕರ್ತ ಜಿಗಳಿ ಪ್ರಕಾಶ್‌, ಡಿ.ವೈ. ಇಂದಿರಾ, ವಿಜಯಶ್ರೀ ಮಹೇಂದ್ರಕುಮಾರ್‌, ಗೌರಮ್ಮ ಮಂಜುನಾಥ್‌, ಡಿ.ಎಸ್ 4ರ ಜಿಲ್ಲಾಧ್ಯಕ್ಷ ಸಂತೋಷ್ ನೋಟದವರ, ಸಾರಥಿ ಗ್ರಾ.ಪಂ. ಸದಸ್ಯ ಗೋಣೆಪ್ಪ, ವೇದಿಕೆಯ ಜಿಲ್ಲಾ ಸಂಚಾಲಕ ಮಾಡಾಳ್‌ ಶಿವಕುಮಾರ್‌ ಮತ್ತಿತರರು ಭಾಗವಹಿಸಿದ್ದರು.

error: Content is protected !!