ಅಮೃತ ಮಹೋತ್ಸವದ ವಿಶೇಷ ಉಪನ್ಯಾಸದಲ್ಲಿ ಎಚ್. ಬಿ. ಮಂಜುನಾಥ
ದಾವಣಗೆರೆ,ಜ.30- ಸ್ವತಂತ್ರ ನಿರ್ಧಾರ ತೆಗೆದುಕೊಳ್ಳಲು ಆಗದ ಯಾವುದೇ ದೇಶವಾಗಲೀ, ಸಮಾಜವಾಗಲೀ, ವ್ಯಕ್ತಿಯಾಗಲೀ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಿಕಾ ವ್ಯಂಗ್ಯಚಿತ್ರಕಾರ ಎಚ್. ಬಿ. ಮಂಜುನಾಥ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಸಂಯುಕ್ತಾಶ್ರಯದಲ್ಲಿ `ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ’ ಮತ್ತು `ರಾಷ್ಟ್ರೀಯ ಪ್ರವಾಸೋದ್ಯಮ ದಿನ’ ದ ಅಂಗವಾಗಿ ಏರ್ಪಾಡಾಗಿದ್ದ ವಿಚಾರ ಸಂಕಿರಣದಲ್ಲಿ `ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇವನಗರಿ ಕೊಡುಗೆ” ಎಂಬ ವಿಷಯವಾಗಿ ಅವರು ಉಪನ್ಯಾಸ ನೀಡಿದರು.
ಬ್ರಿಟಿಷರ ಆಳ್ವಿಕೆ ಸಂದರ್ಭದಲ್ಲಿ ಇದ್ದ ಭಾರತದ ಸ್ಥಿತಿ ಯನ್ನು ನಿವಾರಿಸಿದ ಕೀರ್ತಿ ನಮ್ಮ ಸ್ವಾತಂತ್ರ್ಯ ಸೇನಾನಿಗಳಿಗೆ ಸಲ್ಲುತ್ತದೆ, ಅವರ ತ್ಯಾಗ, ಹೋರಾಟ, ಬಲಿದಾನಗಳನ್ನು ಸ್ಮರಿಸಿಕೊಳ್ಳುತ್ತಾ ಪರತಂತ್ರದ ಸ್ಥಿತಿಯನ್ನು ಕೇಳಿ ತಿಳಿದಾಗ ಸ್ವಾತಂತ್ರ್ಯದ ಮಹತ್ವ ಏನೆಂಬುದು ಹಾಗೂ ಅದರ ಮೌಲ್ಯಗಳ ಅರಿವು ನಮಗಾಗುತ್ತದೆ ಎಂದರು.
ದಾವಣಗೆರೆಯಲ್ಲಿ ಸ್ವಾತಂತ್ರ್ಯ ಹೋರಾಟವು 1920 ರ ಸ್ವದೇಶಿ ಚಳುವಳಿಯಿಂದ ಆರಂಭಗೊಂಡು 1942 ರ ವೇಳೆಗೆ ತಾರಕಕ್ಕೇರಿ 1947ರ ವರೆಗೆ ನಡೆದ ಹೋರಾಟ ಬಲಿದಾನಗಳ ನಿದರ್ಶನಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು.
ಸ್ವಾತಂತ್ರ್ಯ ಚಳುವಳಿಯಲ್ಲಿ ಗಾಂಧೀಜಿ ಅಂಥವರ ಪಾತ್ರ ಎಷ್ಟಿದೆಯೋ, ಅಷ್ಟೇ ನೇತಾಜಿ ಸುಭಾಷ್ ಚಂದ್ರ ಬೋಸ್ ರಂಥವರ ಪಾತ್ರವೂ ಮಹತ್ವದ್ದಾಗಿದೆ ಎಂದು ಮಂಜುನಾಥ್ ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಪೂಜಾರ್ ವೀರ ಮಲ್ಲಪ್ಪ, ಪ್ರವಾಸೋದ್ಯಮ ಬೆಳೆದರೆ ಆರ್ಥಿಕ ಚಟುವಟಿಕೆಯೂ ಬೆಳೆಯುತ್ತದೆ ಎಂದರು. ಪ್ರವಾಸೋದ್ಯಮ ಇಲಾಖೆಯ ಸ್ಥಳೀಯ ಸಹಾಯಕ ನಿರ್ದೇಶಕ ಪಾಲಾಕ್ಷ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ರಾಜನಹಳ್ಳಿ ಸೀತಮ್ಮ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಕುಸಗಟ್ಟಿ ವಹಿಸಿದ್ದರು. ಅಧ್ಯಾಪಕಿ ಅನ್ನಪೂರ್ಣ ನಿರೂಪಿಸಿದ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸೇನಾನಿ ಬಳ್ಳಾರಿ ಸಿದ್ದಮ್ಮ ನವರ ಮೊಮ್ಮಗ ಚಿತ್ರಿಕಿ ಶಿವಕುಮಾರ್ ವಚನ ಪ್ರಾರ್ಥನೆ ಹಾಡಿದರು. ಅಧ್ಯಾಪಕ ಮಂಜಪ್ಪ ಸ್ವಾಗತ ಕೋರಿದರು. ಅಧ್ಯಾಪಕಿ ಸೈದಾ ಮತದಾನದ ಪ್ರಮಾಣ ವಚನ ಬೋಧಿಸಿದರು.
ವೇದಿಕೆಯಲ್ಲಿ ಮುನ್ಸಿಪಲ್ ಜ್ಯೂನಿಯರ್ ಕಾಲೇಜಿನ ಪ್ರಾಚಾರ್ಯ ಸುರೇಶ್, ಹರಿಹರದ ರಾಜಶೇಖರಪ್ಪ ಮುಂತಾದವರು ಉಪಸ್ಥಿತರಿದ್ದರು.