ಶಾಂತಿಸಾಗರ (ಸೂಳೆಕೆರೆ) : ಅರೆ ನೀರಾವರಿ ಬೆಳೆಗಳಿಗೆ ಮಾತ್ರ ನೀರು

ದಾವಣಗೆರೆ, ಜ.28- ಶಾಂತಿಸಾಗರ (ಸೂಳೆಕೆರೆ)ದಲ್ಲಿ 2022 ರ ಬೇಸಿಗೆ ಹಂಗಾಮಿಗೆ ನೀರು ಹರಿಸಲು ಕುಡಿಯುವ ನೀರು ಹೊರತುಪಡಿಸಿ ಸಿದ್ಧ ನಾಲಾ ಮತ್ತು ಬಸವ ನಾಲಾಗಳಿಗೆ ಏಪ್ರಿಲ್ 30 ರವರೆಗೆ ನಿರಂತರವಾಗಿ ನೀರನ್ನು ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರ ಹರಿಸಲಾಗುವುದು ಎಂದು ಭದ್ರಾ ನಾಲಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.

ಪ್ರಸಕ್ತ ಬೇಸಿಗೆ ಹಂಗಾಮಿಗೆ ಕುಡಿಯುವ ನೀರು 779 ಎ.ಸಿ.ಎಫ್.ಟಿ. ಹೊರತುಪಡಿಸಿ ಅರೆ ನೀರಾವರಿ ಮತ್ತು ತೋಟದ ಬೆಳೆಗೆ ಅವಶ್ಯವಿರುವ 1012 ಎಸಿಎಫ್‌ಟಿ ಕೆರೆಯಲ್ಲಿ ನೀರಿನ ಲಭ್ಯತೆ ಇರುವುದರಿಂದ ಜ. 20 ರಿಂದ ಏ. 30 ರವರೆಗೆ ಸಿದ್ಧ ನಾಲಾ-60 ಕ್ಯೂಸೆಕ್ಸ್ ಮತ್ತು ಬಸವ ನಾಲಾ- 45 ಕ್ಯೂಸೆಕ್ಸ್ ನಂತೆ ನಿರಂತರವಾಗಿ ನೀರನ್ನು ಅರೆ ನೀರಾವರಿ ಬೆಳೆಗಳನ್ನು ಬೆಳೆಯಲು ಮಾತ್ರ ಹರಿಸಲು ತೀರ್ಮಾನಿಸಲಾಗಿದೆ.

ಬೆಳೆ ಮಾದರಿ ಉಲ್ಲಂಘಿಸುವವರು, ನೀರಾವರಿ ಕಾಲುವೆ ಹಾಗೂ ಕಟ್ಟಡಗಳನ್ನು ಜಖಂಗೊಳಿಸುವವರು, ನಿಯಮಿತ ಪ್ರಮಾಣಿಕ್ಕಿಂತ ಹೆಚ್ಚು ನೀರನ್ನು ಬಳಸುವವರು ಮತ್ತು ಅನಧಿಕೃತ ನೀರಾವರಿ ಬೆಳೆಗಾರರು ಕರ್ನಾಟಕ ನೀರಾವರಿ ಕಾಯ್ದೆ 1965 ರ ವಿವಿಧ ನಿಯಮಗಳ ಪ್ರಕಾರ ಕಾನೂನು  ಕ್ರಮಕ್ಕೆ ಒಳಗಾಗುತ್ತಾರೆ ಎಂದು ಎಚ್ಚರಿಸಿದ್ದಾರೆ.

ಬೇಸಿಗೆ ಹಂಗಾಮಿನಲ್ಲಿ ರೈತರು ಹೆಚ್ಚು ನೀರುಣ್ಣುವ ಬೆಳೆಯುವ ಭತ್ತವನ್ನು ಬೆಳೆಯದೇ, ಅರೆ ನೀರಾವರಿ ಬೆಳೆಯನ್ನು ಮಾತ್ರ ಬೆಳೆಯಲು ಸೂಚನೆ ನೀಡಲಾಗಿದೆ. ಪ್ರಕಟಿತ ಬೆಳೆಯನ್ನು ಬೆಳೆಯದೇ ಉಲ್ಲಂಘನೆ ಮಾಡಿ ಬೇರೆ ಬೆಳೆಯನ್ನು ಬೆಳೆದರೆ ಜಲಸಂಪನ್ಮೂಲ ಇಲಾಖೆಯ ಜವಾಬ್ದಾರಿಯಾಗುವುದಿಲ್ಲ. ಇದಕ್ಕೆ ರೈತರ ಸಹಕಾರ ಅತ್ಯಗತ್ಯ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ನಂ.3 ಭದ್ರಾ ನಾಲಾ ಉಪವಿಭಾಗ ತ್ಯಾವಣಗಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

error: Content is protected !!