ಸಂಸದ ಜಿ.ಎಂ. ಸಿದ್ದೇಶ್ವರ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎಸ್.ಟಿ.ಪಿ.ಐ. ಉಪ ಕೇಂದ್ರ ಸ್ಥಾಪನೆ ಸಿದ್ಧತೆ ಪರಿಶೀಲಿಸಲು ತೆರಳಲಿಲ್ಲ. ಆದರೆ, ಜಿಎಂಐಟಿ ಅತಿಥಿ ಗೃಹದಲ್ಲಿ ಅಧಿಕಾರಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದುಕೊಂಡರು. ಎಸ್‌ಟಿಪಿಐ ಕೇಂದ್ರ ಸ್ಥಾಪನೆಗೆ ಸಮರೋಪಾದಿಯಲ್ಲಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರಕ್ಕೆ ಪ್ರಯತ್ನ
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ವತಿಯಿಂದ ದಾವಣಗೆರೆಯಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಎಸ್‌ಟಿಪಿಐ ಉಪ ಕೇಂದ್ರ ಕಾರ್ಯಾರಂಭ ಮಾಡಲಿದೆ. ಇದರ ಜೊತೆಗೆ ಸೆಂಟರ್ ಆಫ್ ಎಕ್ಸಲೆನ್ಸ್ ಕೇಂದ್ರ ತರಲು ಪ್ರಸ್ತಾವನೆ ಸಿದ್ಧಪಡಿಸಲು ಸೂಚನೆ ನೀಡಿದ್ದೇನೆ. ಇದಕ್ಕೆ ಎಸ್‌ಟಿಪಿಐ ಬೆಂಗಳೂರಿನ ಹಿರಿಯ ನಿರ್ದೇಶಕ ಶೈಲೇಂದ್ರ ತ್ಯಾಗಿ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಸಿದ್ದೇಶ್ವರ ಹೇಳಿದ್ದಾರೆ.
ಸೆಂಟರ್ ಆಫ್ ಎಕ್ಸಲೆನ್ಸ್ ಮೂಲಕ ನವೋದ್ಯಮಗಳಿಗೆ ಮೂಲಸೌಕರ್ಯ, ಸಂಪನ್ಮೂಲ, ತರಬೇತಿ, ಮಾರ್ಗದರ್ಶನ, ತಂತ್ರಜ್ಞಾನ ಬೆಂಬಲ ಮತ್ತು ಧನ ಸಹಾಯ ಸಿಗಲಿದೆ ಎಂದವರು ತಿಳಿಸಿದ್ದಾರೆ.
ನವೋದ್ಯಮಿಗಳು,ನವ ತಂತ್ರಜ್ಞಾನಕ್ಕೆ ನೆರವು
ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲ ಯದ ಸಂಘಟನೆಯಾದ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಐ.ಟಿ. – ಐ.ಟಿ.ಇ.ಎಸ್. ವಲಯ, ವಿಶೇಷವಾಗಿ ನವೋದ್ಯಮಗಳಿಗೆ ನೆರವಾಗುತ್ತಿದೆ. ಕೈಗಾರಿಕೆ, ಅನ್ವೇಷಣೆ, ಅಭಿವೃದ್ಧಿ, ನವೋದ್ಯಮಗಳಿಗೆ ಎಸ್‌ಟಿಪಿಐ ನೆರವಾಗುತ್ತಿದೆ. ಐ.ಒ.ಟಿ., ಬ್ಲಾಕ್‌ಚೈನ್, ಕೃತಕ ಬುದ್ಧಿವಂತಿಕೆ, ರೋಬೋಟಿಕ್ಸ್, ಅನಿಮೇಷನ್, ಡಾಟಾ ಸೈನ್ಸ್ – ಅನಲಿಟಿಕ್ಸ್ ಅಷ್ಟೇ ಅಲ್ಲದೇ, ಸೈಬರ್ ರಕ್ಷಣೆ ಮತ್ತಿತರೆ ಇತ್ತೀಚಿನ ತಂತ್ರಜ್ಞಾನಗಳ ಅಭಿವೃದ್ಧಿಗೆ ಎಸ್.ಟಿ.ಪಿ.ಐ. ಉತ್ತೇಜನ ನೀಡುತ್ತಿದೆ.
ಬೆಂಗಳೂರಿನ ಎಸ್‌ಟಿಪಿಐ ಹಿರಿಯ ನಿರ್ದೇಶಕ ಶೈಲೇಂದ್ರ ತ್ಯಾಗಿ ವಿಶ್ವಾಸ
ದಾವಣಗೆರೆ, ನ. 27 – ನವೋದ್ಯಮಿಗಳು ಹಾಗೂ ಸಣ್ಣ ಉದ್ಯಮಿಗಳಿಗೆ ನೆರವಾಗುವ ಮೂಲಕ ದಾವಣಗೆರೆಯನ್ನು ಐ.ಟಿ. ಕಂಪನಿಗಳ ಕೇಂದ್ರ ಮಾಡಲು ನೆರವಾಗುವ ಎಸ್‌ಟಿಪಿಐ (ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ) ಉಪಕೇಂದ್ರ ಬರುವ ಏಪ್ರಿಲ್‌ನಲ್ಲಿ ಉದ್ಘಾಟನೆಯಾಗಲಿದೆ ಎಂದು ಬೆಂಗಳೂರಿನ ಎಸ್‌ಟಿಪಿಐ ಹಿರಿಯ ನಿರ್ದೇಶಕ ಶೈಲೇಂದ್ರ ತ್ಯಾಗಿ ತಿಳಿಸಿದ್ದಾರೆ.
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಎಸ್‌ಟಿಪಿಐ ಉಪಕೇಂದ್ರ ಸ್ಥಾಪಿಸಲು ಜಾಗ ನೀಡಲಾಗಿದೆ. ಇಲ್ಲಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿಗಳ ನಂತರ ದಾವಣಗೆರೆಯಲ್ಲಿ ನಾಲ್ಕನೇ ಉಪ ಕೇಂದ್ರ ಸ್ಥಾಪನೆಯಾಗುತ್ತಿದೆ. ಈ ಕೇಂದ್ರಕ್ಕೆ ಎಸ್‌ಟಿಪಿಐ ಮೂಲಕ 2.62 ಕೋಟಿ ರೂ.ಗಳ ವೆಚ್ಚ ಮಾಡಲಾಗುತ್ತಿದೆ ಎಂದವರು ತಿಳಿಸಿದ್ದಾರೆ.
102 ಸೀಟುಗಳ ಪ್ಲಗ್ ಅಂಡ್ ಪ್ಲೇ ಕೇಂದ್ರ, ಉನ್ನತ ವೇಗದ ಅಂತರ್ಜಾಲ ಸೌಲಭ್ಯ, ಸಮಾವೇಶ ಕೊಠಡಿ ಸೇರಿದಂತೆ ಹಲವು ಸೌಲಭ್ಯಗಳು ಈ ಕೇಂದ್ರದಲ್ಲಿ ಸಿಗಲಿವೆ ಎಂದವರು ಹೇಳಿದರು.
ಈ ಉಪ ಕೇಂದ್ರದಿಂದ ದಾವಣಗೆರೆಯಲ್ಲಿ ನವೋದ್ಯಮ ಹಾಗೂ ಉದ್ಯಮಶೀಲತೆಗೆ ಅಗತ್ಯವಾದ ಸೌಲಭ್ಯಗಳು ಸಿಗಲಿವೆ. ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ತ್ಯಾಗಿ ಹೇಳಿದ್ದಾರೆ.
ಈ ಉಪ ಕೇಂದ್ರದಿಂದ ಐ.ಟಿ. ರಫ್ತಿಗೆ ಹೆಚ್ಚಿನ ನೆರವಾಗಲಿದೆ. ಇಲ್ಲಿನ ಎಲ್ಲ ಕಾಲೇಜುಗಳು ಹಾಗೂ ವಿದ್ಯಾರ್ಥಿಗಳೂ ಸಹ ಸೌಲಭ್ಯಗಳಿಂದ ಲಾಭ ಪಡೆಯಬಹುದು ಎಂದವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಜೊತೆ ಒಪ್ಪಂದದ ಷರತ್ತುಗಳನ್ನು ಅಂತಿಮಗೊಳಿಸುವುದು ವಿಳಂಬವಾಗಿತ್ತು. ಕಳೆದ ಡಿಸೆಂಬರ್‌ನಲ್ಲಿ ಎಸ್‌ಟಿಪಿಐ ಕಾಮಗಾರಿ ಆರಂಭವಾಗಿದೆ ಎಂದರು.
ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಎಸ್‌ಟಿಪಿಐ, ಮುಕ್ತ ವಿಶ್ವವಿದ್ಯಾನಿಲಯ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ನಡುವೆ ಸಂಪರ್ಕ ಕೊಂಡಿಯಾಗಿ ಜಿಲ್ಲಾಡಳಿತ ಕೆಲಸ ಮಾಡುತ್ತಿದೆ. ಮಾರ್ಚ್ ಅಂತ್ಯದೊಳಗೆ ಎಸ್‌ಟಿಪಿಐ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನ ಪೂರ್ಣಗೊಂಡ ನಂತರ ಏಪ್ರಿಲ್‌ನಲ್ಲಿ ಉಪ ಕೇಂದ್ರದ ಉದ್ಘಾಟನೆ ಮಾಡುವಂತೆ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರನ್ನು ಸಂಸದ ಸಿದ್ದೇಶ್ವರ ಅವರು ಸಂಪರ್ಕಿಸಿ ಕೇಳಿದ್ದಾರೆ ಎಂದೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್, ಹುಬ್ಬಳ್ಳಿ ಎಸ್‍ಟಿಪಿಐ ಕೇಂದ್ರದ ಜಂಟಿ ನಿರ್ದೇಶಕ ಶಶಿಕುಮಾರ್, ಜಿಪಂ ಉಪಕಾರ್ಯದರ್ಶಿ ಆನಂದ್ ಮತ್ತಿತರರು ಉಪಸ್ಥಿತರಿದ್ದರು.