19 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಪಡೆದ ಸೈನಿಕ

ಹರಪನಹಳ್ಳಿ, ಜ.27- ದೇಶದ ರಕ್ಷಣೆಗಾಗಿ 19 ವರ್ಷಗಳ ಕಾಲ ತಾಯಿ ನಾಡಿಗಾಗಿ ಸೇವೆ ಸಲ್ಲಿಸಿ, ಮರಳಿ ನಮ್ಮ ನಾಡಿಗೆ ಆಗಮಿಸಿದ್ದೇನೆ ಎಂದು ನಿವೃತ್ತ ಸೈನಿಕ ಕೆ. ಹಾಸಿಫ್ ಆಹ್ಮದ್ ಹೇಳಿದರು.

ಪಟ್ಟಣದ ಟೀಚರ್ ಕಾಲೋನಿಯಲ್ಲಿರುವ ಸಾಹಿತಿ ಇಸ್ಮಾಯಿಲ್ ಎಲಿಗಾರ್‌ ಅವರ ನಿವಾಸದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದೇಶದ ರಕ್ಷಣೆಗಾಗಿ ನಾನು ಎರಡು ದಶಕಗಳ ಕಾಲ ಸೇವೆ ಮಾಡಿದ್ದೇನೆ. ನಾನು ಮೂಲತಃ ಬಾವಿಹಳ್ಳಿ ಗ್ರಾಮದವನಾಗಿದ್ದು, ನಮ್ಮ ತಂದೆ- ತಾಯಿ ಬಡತನದಿಂದ ದಾವಣಗೆರೆಗೆ ಸ್ಥಳಾಂತರಗೊಂಡೆನು. ನಮ್ಮ ತಂದೆ ದಾವಣಗೆರೆ ರೈಸ್ ಮಿಲ್‍ನಲ್ಲಿ ಕೂಲಿ ಕೆಲಸ ಮಾಡಿ ಜೀವನ ಮಾಡುತ್ತಿದ್ದರು. ಇಂತವರ ಮಗನಾಗಿ ನಾನು ದೇಶದ ರಕ್ಷಣೆಗಾಗಿ ಸೇವೆ ಮಾಡಿಕೊಂಡು ಮರಳಿ ತಾಯಿ ನಾಡಿಗೆ ಬಂದಿರುವು ದು ನನಗೆ ಸಂತೋಷವಾಗುತ್ತಿದೆ ಎಂದರು.

ನಾನು ದೇಶದ ರಕ್ಷಣೆಗಾಗಿ ದೇಶದ ಅನೇಕ ಗಡಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಜಮ್ಮು ಮತ್ತು ಕಾಶ್ಮೀರದಲ್ಲಿ  3 ವರ್ಷ, ಅಸ್ಸಾಂ, ದೆಹಲಿಯಲ್ಲಿ 3 ವರ್ಷ ಸೇವೆ, ಮುಂಬಯಿ ತಾಜ್ ಹೋಟೆಲ್ ದುರಂತದ ವೇಳೆಯಲ್ಲಿ ಎನ್.ಎಸ್.ಜಿ. ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಮತ್ತು ಇನ್‌ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದೇನೆ. ದೇಶದ ರಕ್ಷಣೆಗಾಗಿ ನಾನು ಯಾವುದೇ ಕಾರ್ಯಕ್ಕೆ ಅಂಜದೇ ಪ್ರಾಮಾಣಿಕ ಸೇವೆ ಮಾಡಿದ್ದೇನೆ ಎಂದು ಅವರು ತಮ್ಮ ಸೇವೆಯನ್ನು ಮೆಲಕು ಹಾಕಿದರು.

ಸಾಹಿತಿ  ಇಸ್ಮಾಯಿಲ್ ಎಲಿಗಾರ್ ಮಾತನಾಡಿ, ಭಾರತ ದೇಶದಲ್ಲಿ ಹಿಂದೂ, ಮುಸ್ಲಿಂ ಅಲ್ಲದೇ ಭಾರತೀಯರ ಒಟ್ಟು ಹೋರಾಟದ ಪ್ರತಿಫಲವೇ ಸ್ವಾತಂತ್ರ್ಯ ನಮಗೆ ದಕ್ಕಿದ್ದು, ಇದಕ್ಕೆ ಬಹುತ್ವ ಭಾರತವೇ ಸಾಕ್ಷಿ. ಇಲ್ಲಿ ಶಾಂತಿ-ಸಹೋದರತ್ವ ಸಮಾನತೆಯೇ ನಮ್ಮೆಲ್ಲರ ಮೂಲ ಆಶಯವಾಗಿರಬೇಕು. ಐಕ್ಯತೆಯಿಂದ ಕೂಡಿದ ದೇಶದಲ್ಲಿ ನಾವು ಜಾತಿ, ಮತ, ಪಂಥ ಬಿಟ್ಟು ಎಲ್ಲರೂ ಒಂದೇ ಜಾತಿ, ಅದು ಮಾನವ ಜಾತಿ. ದೇಶ ರಕ್ಷಣೆಗಾಗಿ ಹೋರಾಟ ಮಾಡುವವರು ಯಾರೂ ಕೂಡ ಜಾತಿ ನೋಡಿ ಸೈನ್ಯಕ್ಕೆ ಸೇರುವುದಿಲ್ಲ. ಸಮಾಜದಲ್ಲಿ ಇರುವಷ್ಟು ದಿನ ನಾವುಗಳು ಸಮಾಜದ ನಾಗರಿಕರಾಗಿ ಸೇವೆ ಮಾಡಬೇಕು ಎಂದರು.

error: Content is protected !!