ಕುರ್ಕಿಯಲ್ಲಿ ಭತ್ತ ಬೆಳೆಯುವ ರೈತರಿಗೆ ತರಬೇತಿ
ದಾವಣಗೆರೆ, ಜ.27- ರೈತರು ನೀರನ್ನು ಅವಶ್ಯಕತೆಗ ನುಗುಣವಾಗಿ ಮಿತವಾಗಿ ಬಳಕೆ ಮಾಡಿಕೊಳ್ಳಬೇಕು ಎಂದು ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ ಹೇಳಿದರು.
ಕುರ್ಕಿ ಗ್ರಾಮದಲ್ಲಿ ಕೃಷಿ ಕಾಯಕ ಯೋಗಿ ರೈತ ಉತ್ಪಾದಕ ಸಂಸ್ಥೆ, ಕೃಷಿ ಇಲಾಖೆ ಸಹಯೋಗದಲ್ಲಿ ಭತ್ತ ಬೆಳೆಯುವ ರೈತರಿಗೆ ತರಬೇತಿ ಕಾರ್ಯಾಗಾರ ಹಾಗೂ ಅರ್ಹ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕಗಳ ವಿತರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೀರನ್ನು ಮಿತವಾಗಿ ಬಳಕೆ ಮಾಡಿಕೊಳ್ಳುವುದರಿಂದ ಭೂಮಿಯ ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ ಉತ್ತಮ ಬೆಳೆ ಪಡೆಯಬಹುದು. ರೈತರು ರೈತ ಉತ್ಪಾದಕ ಸಂಸ್ಥೆಗಳ ಕಡೆ ಗಮನ ಹರಿಸಬೇಕು. ಕೇಂದ್ರ ಸರ್ಕಾರ 75 ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 750 ರೈತ ಉತ್ಪಾದಕ ಸಂಸ್ಥೆಗಳಿಗೆ ರೂ.10 ಲಕ್ಷದಂತೆ ಸಹಾಯ ಧನ ನೀಡುತ್ತಿದೆ. ಅದರಂತೆ ಕೃಷಿ ಕಾಯಕ ಯೋಗಿ ರೈತ ಉತ್ಪಾದಕ ಕಂಪನಿ ಲಿ. ಕುರ್ಕಿಗೆ 10 ಲಕ್ಷ ಸಹಾಯ ಧನ ನೀಡಿದೆ ಎಂದು ತಿಳಿಸಿದರು.
ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಡಾ|| ಮಲ್ಲಿಕಾರ್ಜುನ್, ಭತ್ತ ಬೆಳೆಯುವ ರೈತರಿಗೆ ಡ್ರಮ್‍ಸೀಡರ್, ಕೂರಿಗೆ ಬಿತ್ತನೆ ಮತ್ತು ಚೆಲ್ಲು ಭತ್ತ ಕೃಷಿಯ ಕುರಿತು ತಾಂತ್ರಿಕ ಮಾಹಿತಿ ನೀಡಿದರು. ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ಸಿ.ಎನ್. ಲೋಹಿತ್ ಮಾತನಾಡಿದರು.
ಸಹಾಯಕ ಕೃಷಿ ನಿರ್ದೇಶಕ ಹೆಚ್.ಕೆ. ರೇವಣಸಿದ್ದನಗೌಡ, ಕುರ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಜಿ.ನಂದ್ಯಪ್ಪ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ವಿಜ್ಞಾನಿ ಎ.ಎಂ. ಮಾರುತೇಶ್ ಇತರರಿದ್ದರು.