ದಾವಣಗೆರೆ, ಜ.25- ಮಹಾನಗರ ಪಾಲಿಕೆ 40ನೇ ವಾರ್ಡಿನಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಸ್ವಾಮಿ ವಿವೇಕಾನಂದ ಬಡಾವಣೆ, ವಿನಾಯಕ ಬಡಾವಣೆಗಳಲ್ಲಿ ಒಟ್ಟು 1 ಕೋಟಿ 28 ಲಕ್ಷ ರೂಗಳ ಕಾಮಗಾರಿಗಳಿಗೆ ಶಾಸಕ ಎಸ್.ಎ. ರವೀಂದ್ರನಾಥ್, ಸಂಸದ ಜಿ.ಎಂ. ಸಿದ್ದೇಶ್ವರ, 40ನೇ ವಾರ್ಡಿನ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ನಂಜಪ್ಪ ಅವರುಗಳು ಉದ್ಘಾಟನೆ ಮಾಡುವುದರ ಮೂಲಕ ಚಾಲನೆ ನೀಡಿದರು.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿ 5ನೇ ಕ್ರಾಸ್ ರಾಜಕಾಲುವೆ ಪಕ್ಕದ ಉದ್ಯಾನವನವನ್ನು ಅಭಿವೃದ್ಧಿ ಪಡಿಸುವುದರ ಮೂಲಕ ಕಾಂಪೌಂಡ್ ವಾಲ್, ಚೈನ್‌ಲಿಂಕ್ ಫೆನ್ಸಿಂಗ್ ಅಳವಡಿಸಿ ಸುತ್ತಲೂ ವಾಕಿಂಗ್ ಪಾತ್ ನಿರ್ಮಾಣ ಮಾಡಿ, ಆರ್.ಸಿ.ಸಿ. ಬೆಂಚ್ ಅಳವಡಿಸಿ ಎಲ್.ಇ.ಡಿ. ದೀಪಗಳನ್ನು ಅಳವಡಿಸಲಾಗುವುದು.
ವಿನಾಯಕ ಬಡಾವಣೆಯಲ್ಲಿ ಸೌಜನ್ಯ ಉದ್ಯಾನವನ ಅಭಿವೃದ್ಧಿಪಡಿಸಿ, ಯೋಗ ಫ್ಲಾಟ್ ಫಾರ್ಮ್ ನಿರ್ಮಿಸಿ, ಜನರಿಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗುವುದು. ಉದ್ಯಾನವನದ ಸುತ್ತಲೂ ಎಲ್.ಇ.ಡಿ. ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು ಎಂದು ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ವೀಣಾ ನಂಜಪ್ಪ ತಿಳಿಸಿದರು.