ಜಗಳೂರಿನ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ ಸೌಲಭ್ಯಕ್ಕೆ ಆಗ್ರಹ

ದಾವಣಗೆರೆ, ಜ.24- ಜಗಳೂರು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಗೆ ಸರ್ಕಾರಿ ಬಸ್ ಸೌಲಭ್ಯ ಒದಗಿಸಲು ಒತ್ತಾಯಿಸಿ ಕೆಎಸ್ ಆರ್ ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ಸಿದ್ದೇಶ್ ಹೆಬ್ಬಾಳ್ ಹಾಗೂ ದಾವಣಗೆರೆ ನಿಯಂತ್ರಣ ಅಧಿಕಾರಿ ಮಂಜುನಾಥ್ ಅವರಿಗೆ ಎಸ್ಎಫ್ ಐ ವತಿಯಿಂದ ನಗರದ ಕೆ.ಎಸ್.ಆರ್.ಟಿಸಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಎಸ್ಎಫ್ ಐ ಜಿಲ್ಲಾ ಸಂಚಾಲಕ ಬಿ.ಎಮ್. ಅನಂತರಾಜ್ ಮಾತನಾಡಿ, ಜಗಳೂರು ತಾಲ್ಲೂಕಿನ ಎಲ್ಲಾ ಗ್ರಾಮೀಣ ಭಾಗಗಳಿಗೂ ಸರ್ಕಾರಿ ಬಸ್ ಗಳ ವ್ಯವಸ್ಥೆ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ಇಲಾಖೆಯಿಂದ ವಿದ್ಯಾರ್ಥಿ ಯುವಜನರ ಅನುಕೂಲಕ್ಕಾಗಿ ಬಸ್ ಸೇವೆ ಒದಗಿಸಬೇಕು. ಇಲ್ಲವಾದರೆ ಜಗಳೂರು ಮಾರ್ಗವಾಗಿ ಸಂಚರಿಸುವ ದಾವಣಗೆರೆ ಬಸ್ ಗಳನ್ನು ತಡೆದು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಕರ್ನಾಟಕ ನವ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಎಮ್. ಹೊಳೆ ಮಹಾಲಿಂಗಪ್ಪ ಮಾತನಾಡಿ, ಜಗಳೂರು ತಾಲ್ಲೂಕು ಅತ್ಯಂತ ಹಿಂದುಳಿದ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರೇ ಹೆಚ್ಚಾಗಿ ವಾಸ ಮಾಡುತ್ತಿದ್ದು, ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.ವಿದ್ಯಾರ್ಥಿಗಳು ಸರಿಸುಮಾರು 30ರಿಂದ 40 ಕಿಲೋ ಮೀಟರ್ ದೂರದಿಂದ ಜಗಳೂರು ಪಟ್ಟಣಕ್ಕೆ ವಿದ್ಯಾಭ್ಯಾಸ ಮಾಡಲು ಬರುತ್ತಾರೆ. ಬಸ್ ಗಳ ಸೌಲಭ್ಯ ಒದಗಿಸಬೇಕೆಂದು ಆಗ್ರಹಿಸಿದರು.

ಜಗಳೂರು ತಾಲ್ಲೂಕಿನ ಸರ್ಕಾರಿ ಡಿಪೋ ಮಾಡಲು ಜಗಳೂರು ಪಟ್ಟಣದ ಸರ್ವೆ ನಂಬರ್ 51 ರಲ್ಲಿ 4 ಎಕರೆ ಜಾಗವನ್ನು ತಾಲ್ಲೂಕು ಆಡಳಿತ ಕೆ.ಎಸ್.ಆರ್.ಟಿ.ಸಿ. ಅವರಿಗೆ ಹಸ್ತಾಂತರ ಮಾಡಿದೆ. ಇಲಾಖೆ ಅಧಿಕಾರಿಗಳು ತಮ್ಮ ಸಾರಿಗೆ ಸಚಿವರು, ಶಾಸಕರು, ನಿಗಮದ ಅಧ್ಯಕ್ಷರ ಮೇಲೆ ಒತ್ತಡ ಹಾಕಿ ಹಣವನ್ನು ಬಿಡುಗಡೆ ಮಾಡಿಸಿ, ಗುದ್ದಲಿ ಪೂಜೆ ಮಾಡಿ ಅದಷ್ಟು ಶೀಘ್ರವಾಗಿ ಡಿಪೋ ಕಾಮಗಾರಿ ಪ್ರಾರಂಭಿಸಬೇಕೆಂದರು.

ಈ ಸಂದರ್ಭದಲ್ಲಿ ಹೊನ್ನಮರಡಿ ರಾಜು ಇದ್ದರು.

error: Content is protected !!