ಸೋಂಕು ಹರಡದಂತೆ ನಿಗಾವಹಿಸಬೇಕು

ಮಲೇಬೆನ್ನೂರು : ಕೋವಿಡ್ ಸಭೆಯಲ್ಲಿ ಉಪತಹಶೀಲ್ದಾರ್ ಆರ್. ರವಿ ಸೂಚನೆ

ಮಲೇಬೆನ್ನೂರು, ಜ.20- ಕೊರೊನಾ ಸೋಂಕು ಹರಡುತ್ತಿರುವುದು ನಿಜ. ಆದರೆ, ಈ ಬಾರಿ ಸೋಂಕಿನ ತೀವ್ರತೆ  ಕಡಿಮೆ ಇರುವುದರಿಂದ ಜನರು ಆತಂಕಗೊಳ್ಳುವುದು ಬೇಡ ಎಂದು ಉಪತಹಶೀಲ್ದಾರ್ ಆರ್.ರವಿ ಹೇಳಿದರು.

ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ ಕುರಿತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಬಿಎಲ್ಓ ಹಾಗೂ ಆಶಾ, ಅಂಗನವಾಡಿ ಕಾರ್ಯಕರ್ತರ ಜೊತೆ ಇಂದು ತುರ್ತು ಸಭೆ ನಡೆಸಿದರು.

ಶೀತ, ಕೆಮ್ಮು, ಜ್ವರ ಸೇರಿದಂತೆ ಇತ್ಯಾದಿ ರೋಗ ಲಕ್ಷಣಗಳು ಸತತವಾಗಿ ಕಂಡು ಬಂದರೆ ಕೂಡಲೇ ಕೋವಿಡ್ ಟೆಸ್ಟ್ ಮಾಡಿಸಿ. ಇದರಿಂದ ಸೋಂಕು ನಿಮ್ಮ ಮನೆಯ ಹಾಗೂ ನೆರೆಹೊರೆ ಯವರಿಗೆ ಹರಡುವುದನ್ನು ತಪ್ಪಿಸಬಹುದು. ಈ ನಿಟ್ಟಿನಲ್ಲಿ ಬಿಎಲ್ಓಗಳು, ಆಶಾ, ಅಂಗನವಾಡಿ ಕಾರ್ಯಕರ್ತರು ಸೋಂಕಿತರ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ತಕ್ಷಣ ಪತ್ತೆ ಮಾಡಿ, ಟೆಸ್ಟ್‌ಗೆ ಒಳಪಡಿಸುವ ಮೂಲಕ ಚೈನ್ ಲಿಂಕ್ ತಪ್ಪಿಸಬೇಕೆಂದು ರವಿ ಮನವಿ ಮಾಡಿದರು.

ವೈದ್ಯಾಧಿಕಾರಿ ಡಾ.ಲಕ್ಷ್ಮಿದೇವಿ ಮಾತನಾಡಿ, ಪಟ್ಟಣದಲ್ಲಿ ಸದ್ಯ 35 ಸಕ್ರಿಯ ಕೇಸ್‌ಗಳಿದ್ದು, ಇವರ ಜೊತೆ ಸಂಪರ್ಕ ಹೊಂದಿರುವವರನ್ನು ಪತ್ತೆ ಮಾಡಿ, ಟೆಸ್ಟ್ ಮಾಡಿಸುವ ಕೆಲಸ ನಡೆಯುತ್ತಿದ್ದು, ಸೋಂಕಿತರೆಲ್ಲರೂ ಹೋಂ ಐಸೋಲೇಷನ್‌ನಲ್ಲಿದ್ದಾರೆ. ಕೋವಿಡ್ 2ನೇ ಲಸಿಕೆ ಪಡೆದುಕೊಂಡು 9 ತಿಂಗಳಾಗಿದ್ದರೆ ಅಂತಹವರು ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ  ಎಂದು ಸ್ಪಷ್ಟಪಡಿಸಿದರು.

ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ ಮಾತನಾಡಿ, ಪಟ್ಟಣದಲ್ಲಿ ಸ್ವಚ್ಛತೆಗೆ ಒತ್ತು ನೀಡಿದ್ದು, ಪ್ರತಿ ವಾರ್ಡ್‌ನಲ್ಲೂ ಸ್ಯಾನಿಟೈಜ್ ಮಾಡಲು ಶೀಘ್ರ ಚಾಲನೆ ನೀಡಲಾಗುವುದೆಂದರು. 

ಕಂದಾಯ ನಿರೀಕ್ಷಕ ಸಮೀರ್, ಗ್ರಾಮ ಲೆಕ್ಕಾ ಧಿಕಾರಿ ಕೊಟ್ರೇಶ್, ಪುರಸಭೆ ಅಧಿಕಾರಿಗಳಾದ ಪ್ರಭು, ಉಮೇಶ್, ಶಿವಯೋಗಿ, ಚಿತ್ರಪ್ಪ, ಬಿಎಲ್ಓ ಗಳಾದ ದಂಡಿ ತಿಪ್ಪೇಸ್ವಾಮಿ, ಗೋವಿಂದಪ್ಪ ಸಾವಜ್ಜಿ, ಕರಿಬಸಪ್ಪ, ಪೂಜಾರ್ ಹಾಲೇಶ್,  ಹನುಮಗೌಡ, ಪ್ರೇಮ, ಲೀಲಾಬಾಯಿ ಮತ್ತಿತರರಿದ್ದರು.

error: Content is protected !!