ಇಟ್ಟಿಗೆ ಭಟ್ಟಿಗಳಲ್ಲಿದ್ದ 67 ವಿದ್ಯಾರ್ಥಿಗಳು ಶಾಲೆಗೆ ದಾಖಲು

ಹರಿಹರ, ಜ. 20 –  ಹರಿಹರದ ಗುತ್ತೂರಿನ ಹೊರವಲಯದ ಉಡಸಲಮ್ಮ ದೇವಸ್ಥಾನದ ಆವರಣದಲ್ಲಿ ಬುಧವಾರದಂದು ತಾಲ್ಲೂಕು ಆಡಳಿತದಿಂದ ಇಟ್ಟಿಗೆ ಭಟ್ಟಿ ಮಾಲೀಕರಿಗೆ ಮತ್ತು ಕಾರ್ಮಿಕರಿಗೆ ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಬಗ್ಗೆ ಅರಿವು ಮತ್ತು ನೆರವು ಕಾರ್ಯಕ್ರಮ ನಡೆಸಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ಸಿದ್ದಪ್ಪ ಮಾತನಾಡಿ, ಇಟ್ಟಿಗೆ ಭಟ್ಟಿಗಳಿಗೆ ಉತ್ತರ ಕರ್ನಾಟಕದಿಂದ ಕಾರ್ಮಿಕರು ಕುಟುಂಬ ಸಮೇತ ವಲಸೆ ಬರುತ್ತಾರೆ. ಇದರಿಂದ ಮಕ್ಕಳ ಶಿಕ್ಷಣ ಅರ್ಧಕ್ಕೆ ಮೊಟಕುಗೊಳ್ಳುವ ಆತಂಕವಿದೆ. ಈ ದಿಸೆಯಲ್ಲಿ ತಾಲ್ಲೂಕು ಶಿಕ್ಷಣ ಇಲಾಖೆಯಿಂದ ಇಟ್ಟಿಗೆ ಭಟ್ಟಿಗಳ ಸಮೀಕ್ಷಾ ಕಾರ್ಯ ನಡೆಸಿ ಶಾಲೆ ಬಿಟ್ಟ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಸಮೀಕ್ಷೆ ಪ್ರಕಾರ ಗುತ್ತೂರಿನಲ್ಲಿ 27, ಸಾರಥಿ 8, ಪಾಮೇನಹಳ್ಳಿ 12, ಹಲಸಬಾಳು 14, ತಿಮ್ಮಲಾಪುರ 3, ಹರಗನಹಳ್ಳಿ ಗ್ರಾಮದ ಸುತ್ತಲು 3 ಸೇರಿ ಒಟ್ಟು 67 ವಿದ್ಯಾರ್ಥಿಗಳು ಶಾಲೆ ಬಿಟ್ಟಿದ್ದಾರೆ. ಈ ಎಲ್ಲಾ ಮಕ್ಕಳನ್ನು ಸಮೀಪದ ಗ್ರಾಮಗಳ ಶಾಲೆಗಳಲ್ಲಿ ವಯಸ್ಸು ಆಧರಿಸಿ ದಾಖಲಾತಿ ಮಾಡಿಸಲಾಗಿದೆ ಎಂದರು.

ಕಾರ್ಮಿಕ ನಿರೀಕ್ಷಕ ಪ್ರಸನ್ನಕುಮಾರ್ ಮಾತನಾಡಿ, 14 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಇಂತಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲಿಕರಿಗೆ 20 ರಿಂದ 50 ಸಾವಿರ ರೂ. ದಂಡ, 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಶರಣ ಕುಮಾರ ಹೆಗಡೆ ಮಾತನಾಡಿ, ಬೆಂಗಳೂರಿನ ಮಾರುತಿ ಮೆಡಿಕಲ್ಸ್ ಮಾಲೀಕ ಮಹೇಂದ್ರ ಮುಣೋತ್ ಎಂಬುವರು ಈಗಾಗಲೇ 24 ಸಾವಿರ ನೋಟ್ ಪುಸ್ತಕಗಳನ್ನು ನೀಡಿದ್ದು ಅದನ್ನು ತಾಲ್ಲೂಕಿನ ವಿವಿಧ ಸರ್ಕಾರಿ ಕಿರಿಯ, ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ವಿತರಿಸಲಾಗಿದೆ ಎಂದರು.

ಜೊತೆಗೆ ಈ ಇಟ್ಟಿಗೆ ಭಟ್ಟಿ ಮಕ್ಕಳಿಗೂ ಇವರಿಂದಲೇ ಸರಬರಾಜು ಮಾಡಿದ ನೋಟ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ವಿತರಿಸಲಾಗಿದೆ. ಮತ್ತಷ್ಟು ದಾನಿಗಳನ್ನು ಸಂಪರ್ಕಿಸಿ ಬ್ಯಾಗ್, ಸಮವಸ್ತ್ರ, ಲೇಖನ ಸಾಮಗ್ರಿಗಳನ್ನು ಶೀಘ್ರದಲ್ಲೇ ಒದಗಿಸಲಾಗುವುದೆಂದರು.

ಉಪ ತಹಸೀಲ್ದಾರ್ ಶಶಿಧರಯ್ಯ, ನಗರಸಭೆ ಪೌರಾಯುಕ್ತರಾದ ಶ್ರೀಮತಿ ಎಸ್.ಲಕ್ಷ್ಮಿ, ಸ್ಥಳೀಯ ಕಾರ್ಮಿಕ ನಿರೀಕ್ಷಕಿ ಕವಿತ, ಸಿಡಿಪಿಒ ನಿರ್ಮಲ, ಎಸಿಡಿಪಿಒ ಪ್ರಿಯದರ್ಶಿನಿ, ಬಿಆರ್‌ಸಿ ಜಗದೀಶ್, ಪಿಡಿಒ ವಿಜಯಲಕ್ಷ್ಮಿ, ಇಟ್ಟಿಗೆ ಭಟ್ಟಿ ಮಾಲಿಕರು ಉಪಸ್ಥಿತರಿದ್ದರು.

error: Content is protected !!