ಪ್ರವೃತ್ತಿಯನ್ನಾಗಿಸಿಕೊಂಡಿದ್ದ ಬರಹ ಭವಿಷ್ಯ ರೂಪಿಸಿ, ಸಾಹಿತಿಯನ್ನಾಗಿಸಿದೆ

ದಾವಣಗೆರೆ, ಜ.20-ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಹೆಚ್.ವಿ.ಮಂಜುನಾಥ ಸ್ವಾಮಿ ಅವರು ತಮ್ಮ ಬದುಕಿನ ಅಂತರಾಳದ ಭಾವನೆಗಳನ್ನು ಹಂಚಿಕೊಳ್ಳುವ ಸದುದ್ಧೇಶದಿಂದ ಹವ್ಯಾಸಿ ಬರಹಗಾರರನ್ನಾಗಿಸಿಕೊಳ್ಳುವುದರ ಮೂಲಕ ರಚಿಸಿದ ಹಲವಾರು ಲೇಖನ – ಕವಿತೆಗಳ ಸಂಗ್ರಹ `ಬದುಕು – ಬಯಕೆ – ಭಾವನೆ’ ಕೃತಿ ಸಾಹಿತ್ಯ ಲೋಕಕ್ಕೆ ಸಮರ್ಪಿತಗೊಂಡಿದೆ.

ದಾವಣಗೆರೆ ಲಯನ್ಸ್ ಕ್ಲಬ್ ಸಹಯೋಗದೊಂದಿಗೆ ಲಯನ್ಸ್ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಸರಳ ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಈ ಪುಸ್ತಕವನ್ನು ಬಿಡುಗಡೆ ಮಾಡುವುದರೊಂದಿಗೆ ಸಾಹಿತ್ಯ ಕ್ಷೇತ್ರಕ್ಕೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಆಶಯ ನುಡಿಗಳನ್ನಾಡಿದ ವಾಮದೇವಪ್ಪ, `ಬದುಕು – ಬಯಕೆ – ಭಾವನೆ’ ಕೃತಿಯು ಸ್ಫೂರ್ತಿದಾಯಕ ಮತ್ತು ಜೀವನೋತ್ಸಾಹ ಮೂಡಿಸುವಂತಹದ್ದಾಗಿದ್ದು, ವೈವಿಧ್ಯಮ ಭಾವನೆಗಳನ್ನು ಶಕ್ತಿ ವರ್ಧಕ ಟಾನಿಕ್ ರೂಪದಲ್ಲಿ ಮಂಜುನಾಥ ಸ್ವಾಮಿ ನೀಡಿದ್ದಾರೆ ಎಂದು ಮುಕ್ತ ಕಂಠದಿಂದ ಶ್ಲ್ಯಾಘಿಸಿದರು.

ಸಮಾರಂಭದ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಮಂಜುನಾಥ ಸ್ವಾಮಿ ಅವರು ಮನೆಗಳನ್ನು ಕಟ್ಟುವುದರ ಜೊತೆಗೆ, ಪ್ರವೃತ್ತಿಯನ್ನಾಗಿಸಿಕೊಂಡ ಬರವಣಿಗೆಯಲ್ಲಿ ಸದ್ವಿಚಾರಗಳ ಮೂಲಕ ಮನಸ್ಸು ಕಟ್ಟುವ ಕಾಯಕ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು.

ಜೀವನದಲ್ಲಿ ಸಮಸ್ಯೆಗಳು ಸರ್ವೇ ಸಾಮಾನ್ಯ. ಅವನ್ನು ಧೈರ್ಯ ಕಳೆದುಕೊಳ್ಳದೇ ಸಮರ್ಥವಾಗಿ ಎದುರಿಸಬೇಕು ಎನ್ನುವಂತಹ ಹಲವಾರು ಲೇಖನ – ಕವಿತೆಗಳ ಮೂಲಕ ಮಂಜುನಾಥ ಸ್ವಾಮಿ ಅವರು ಈ ಪುಸ್ತಕದಲ್ಲಿ ಜೀವನೋತ್ಸಾಹ ತುಂಬಿದ್ದಾರೆ ಎಂದು ಶ್ರೀಗಳು ತಿಳಿಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಿರಿಯ ಸಿವಿಲ್ ಇಂಜಿನಿಯರ್ ಹಾಗೂ ಕಲಾವಿದ ಆರ್.ಟಿ. ಅರುಣ್ ಕುಮಾರ್ ಮಾತನಾಡಿ, ಪುಸ್ತಕದಲ್ಲಿನ ಲೇಖನಗಳು – ಕವಿತೆಗಳು ಪಾಂಡಿತ್ಯದ ಬರಹಗಳಲ್ಲ ; ಅನುಭವದಿಂದ ಕೂಡಿರುವ ಬರಹಗಳು. ಮಂಜಣ್ಣ ವ್ಯಕ್ತಪಡಿಸಿರುವ ವಿಷಯಗಳಲ್ಲಿ ಗಟ್ಟಿತನವಿದೆ ; ಯುವಜನರ ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಸ್ಫೂರ್ತಿದಾಯಕ ವಿಷಯಗಳು `ಬದುಕು – ಬಯಕೆ – ಭಾವನೆ’ ಪುಸ್ತಕದಲ್ಲಿ ಅಡಗಿವೆ ಎಂದು ಮಾರ್ಮಿಕವಾಗಿ ವಿಶ್ಲೇಷಿಸಿದರು.

ಮತ್ತೋರ್ವ ಅತಿಥಿಯಾಗಿದ್ದ ಶ್ರೀ ಜಗದ್ಗುರು ಜಯವಿಭವ ವಿದ್ಯಾಸಂಸ್ಥೆ ಸಹ ಕಾರ್ಯದರ್ಶಿ ಎಂ.ಕೆ. ಬಕ್ಕಪ್ಪ ಮಾತನಾಡಿ, ಜೀವನದಲ್ಲಿ ಮನಃಶ್ಯಾಂತಿ ಮತ್ತು ನೆಮ್ಮದಿ ಹುಡುಕುವವರಿಗೆ ಈ ಪುಸ್ತಕ ಮಾರ್ಗದರ್ಶನ ನೀಡಬಲ್ಲದು ಎಂದು ಅಭಿಪ್ರಾಯಪಟ್ಟರು.

ಇನ್ನೋರ್ವ ಅತಿಥಿಯಾಗಿದ್ದ ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ. ಜಯಕುಮಾರ್ ಮಾತನಾಡಿ, ಕಷ್ಟ ಪಟ್ಟು ಬದುಕನ್ನು ಕಟ್ಟಿಕೊಂಡಿರುವ ಮಂಜುನಾಥ ಸ್ವಾಮಿ ಅವರು ತಮ್ಮ ಜೀವನದಲ್ಲಿ ಕಲಿತ ನೋವು – ನಲಿವುಗಳ ಪಾಠವನ್ನು ಬರವಣೆಗೆಯ ಮೂಲಕ ವ್ಯಕ್ತಪಡಿಸಿ ಯುವ ಸಮೂಹಕ್ಕೆ ಸಲಹೆ – ಸೂಚನೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶ್ಲ್ಯಾಘಿಸಿದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್. ಓಂಕಾರಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಲಯನ್ಸ್ ವಿಶ್ರಾಂತ ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್, ಜನತಾವಾಣಿ ಉಪ ಸಂಪಾದಕ ಇ.ಎಂ. ಮಂಜುನಾಥ, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಅಜ್ಜಂಪುರ ಶೆಟ್ರು ಮೃತ್ಯುಂಜಯ, ಲಯನ್ಸ್ ಟ್ರಸ್ಟ್ ಖಜಾಂಚಿ ಎನ್.ವಿ. ಬಂಡಿವಾಡ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಈ ಪುಸ್ತಕ ಆಸಕ್ತರ ಕೈ ಸೇರಲಿ, ಓದುಗರಲ್ಲಿ ಜೀವನೋತ್ಸಾಹ ಬೀರಲಿ, ಮುದುಡಿದ ಮನಸ್ಸುಗಳು ಅರಳುವಂತೆ ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಭಾಷಣ ಮಾಡಿದ ಕೃತಿಕಾರ ಹೆಚ್.ವಿ. ಮಂಜುನಾಥ ಸ್ವಾಮಿ, ಲೇಖನ ಮತ್ತು ಕವಿತೆ ಬರೆಯುವುದನ್ನು ರೂಢಿಸಿಕೊಂಡ ಬಗೆಯನ್ನು ಸ್ವಾರಸ್ಯಕರವಾಗಿ ಮೆಲುಕು ಹಾಕಿದರು. ಮಂಜುನಾಥ ಸ್ವಾಮಿ ಅವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಅವರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ಸಿ.ಅಜಯ್ ಕುಮಾರ್ ಪ್ರಾರ್ಥನೆಯ ನಂತರ ಲಯನ್ಸ್ ಕ್ಲಬ್ ಕಾರ್ಯದರ್ಶಿ ಕೋರಿ ಶಿವಕುಮಾರ್, ಸಹ ಕಾರ್ಯದರ್ಶಿ ಎಸ್.ಕೆ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಖಜಾಂಚಿ ಕಣವಿ ನಟರಾಜ್ ವಂದಿಸಿದರು. ಲಯನ್ಸ್ ಪಿಯು ಕಾಲೇಜಿನ ಕಾರ್ಯದರ್ಶಿ ಸುರಭಿ ಎಸ್. ಶಿವಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ಬಹುಮುಖ ಪ್ರತಿಭೆ : ಹೆಚ್.ವಿ. ಮಂಜುನಾಥ ಸ್ವಾಮಿ ಅವರದು ; ಕಲಾ ಕನ್ಸಸ್ಟ್ರಕ್ಷನ್ಸ್ ಮೂಲಕ ಕಲಾತ್ಮಕ ಕಟ್ಟಡಗಳನ್ನು ಕಟ್ಟಿಸುವುದರ ಜೊತೆಗೆ ಬದುಕು, ಭಾವನೆ, ಸ್ನೇಹ – ಸಂಬಂಧಗಳನ್ನು ಕಟ್ಟಿ ಬದುಕನ್ನು ಹೇಗೆ ಗಟ್ಟಿಗಳಿಸಿಕೊಳ್ಳಬೇಕು ಎಂಬ ಕಲೆಯನ್ನು ತಮ್ಮ
ಮಾತು ಮತ್ತು ಬರಹಗಳಲ್ಲಿ ತಿಳಿಸುವುದರ ಜೊತೆ – ಜೊತೆಗೆ, ಸಾಹಿತ್ಯಿಕ – ಸಾಂಸ್ಕೃತಿಕ – ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡ ಕ್ರಿಯಾಶೀಲ ಮತ್ತು ಬಹುಮುಖ್ಯ ವ್ಯಕ್ತಿತ್ವದ ಪ್ರತಿಭೆ.

ತಮ್ಮ ವೃತ್ತಿ ಸಂಸ್ಥೆ ಫೋರಂ ಆಫ್ ಪ್ರಾಕ್ಟೀಸಿಂಗ್ ಆರ್ಕಿಟೆಕ್ಸ್ ಮತ್ತು ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯ ಅಧ್ಯಕ್ಷರಾಗಿ, ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ `ಸಿನಿಮಾ ಸಿರಿ’ ಅಧ್ಯಕ್ಷರಾಗಿ, ಲಯನ್ಸ್ ಕ್ಲಬ್
ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಮಂಜುನಾಥ ಸ್ವಾಮಿ, ಶ್ರೀ ಮುರುಘರಾಜೇಂದ್ರ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ, ಶ್ರೀ ಜಗದ್ಗುರು ಜಯದೇವ ಪ್ರಸಾದ ನಿಲಯದ ನಿರ್ದೇಶಕರಾಗಿ, ಇತರೆ ಸಾಮಾಜಿಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯ ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

error: Content is protected !!