ದಾವಣಗೆರೆ, ಜ.20- ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯಯರ ಚೆಸ್ ಪಂದ್ಯಾವಳಿ ಮತ್ತು ಆಯ್ಕೆ ಪ್ರಕ್ರಿಯೆಗೆ ನಗರದ ಬಾಪೂಜಿ ಎಂ.ಬಿ.ಎ. ಕಾಲೇಜು ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.
ದಾವಣಗೆರೆ ವಿವಿ ಹಾಗೂ ಚಿತ್ರದುರ್ಗ ಸ್ನಾತಕೋತ್ತರ ಕೇಂದ್ರದಡಿಯಲ್ಲಿ ಬರುವ ವಿವಿಧ ಕಾಲೇಜುಗಳಿಂದ ಪ್ರತಿ ತಂಡದಲ್ಲಿ ಆರು ಸ್ಪರ್ಧಿಗಳುಳ್ಳ 10 ಮಹಿಳೆಯರ ತಂಡ ಹಾಗೂ 20 ಪುರುಷರ ತಂಡಗಳು ಚೆಸ್ ಪಂದ್ಯಾವಳಿಗೆ ಆಗಮಿಸಿದ್ದವು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ದಾವಣಗೆರೆ ವಿವಿ ದೈಹಿಕ ಶಿಕ್ಷಣ ವಿಭಾಗದ ಡೀನ್ ಹಾಗೂ ಪ್ರಭಾರ ನಿರ್ದೇಶಕ ಡಾ.ಕೆ.ವೆಂಕಟೇಶ್, `ಮೈಂಡ್ ಗೇಮ್’ ಎಂದೇ ಹೇಳುವ ಚೆಸ್ ಕ್ರೀಡೆಯು ಏಕಾಗ್ರತೆಯನ್ನು ಹೆಚ್ಚಿಸುತ್ತದೆ ಎಂದರು.
ಪ್ರತಿ ವರ್ಷ ಚೆಸ್ ಕ್ರೀಡಾಕೂಟ ನಡೆಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಲ್ಲಿ ಕ್ರೀಡಾಕೂಟ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ದಾವಿವಿಯಿಂದ ಪ್ರತಿ ವರ್ಷ ಸುಮಾರು 50 ಲಕ್ಷ ರೂ.ಗಳನ್ನು ಕ್ರೀಡಾಕೂಟಗಳಿಗಾಗಿಯೇ ಬಳಕೆ ಮಾಡಲಾಗುತ್ತದೆ. ಕೊರೊನಾದಿಂದಾಗಿ ನಾಲ್ಕೈದು ಲಕ್ಷ ರೂ. ಮಾತ್ರ ಬಳಕೆಯಾಗಿದೆ. ಪ್ರಸ್ತುತ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಸುಮಾರು 60 ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿರುವುದಾಗಿ ಹೇಳಿದರು.
ಬಾಪೂಜಿ ಬಿ-ಸ್ಕೂಲ್ ನಿರ್ದೇಶಕ ಡಾ.ಸ್ವಾಮಿ ತ್ರಿಭುವಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಬಾಪೂಜಿ ಎಂ.ಬಿ.ಎ. ಕಾಲೇಜು ಆವರಣ ಎಲ್ಲಾ ರೀತಿಯ ಕ್ರೀಡಾಕೂಟಗಳನ್ನು ನಡೆಸಲು ಅತ್ಯುತ್ತಮ ಸ್ಥಳವಾಗಿದೆ. ಇದೊಂದು ಸ್ಪೋರ್ಟ್ಸ್ ಕ್ಯಾಂಪಸ್ ಎಂದರೆ ತಪ್ಪಾಗಲಾರದು ಎಂದರು.
ಬಿ.ಐ.ಹೆಚ್.ಇ. ಪ್ರಾಂಶುಪಾಲ ಡಾ.ಬಿ. ವೀರಪ್ಪ, ಪ್ರಾಂಶುಪಾಲ ನವೀನ್, ಸದಾಶಿವಪ್ಪ ಇತರರು ಉಪಸ್ಥಿತರಿದ್ದರು. ಬಾಪೂಜಿ ಅಕಾಡೆಮಿ ಆಫ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್ ಸಹಯೋಗದಲ್ಲಿ 2 ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.