ದಾವಣಗೆರೆ, ಜ.20- ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ಹೇಳಿಕೆ ಹತಾಶೆಯಿಂದ ಕೂಡಿದ್ದು, ಅವರು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.
ವಿನೋಬನಗರ 16 ನೇ ವಾರ್ಡ್ನಲ್ಲಿ ಕೇವಲ 6500 ರಿಂದ 7000 ನೈಜ ಮತದಾರರಿದ್ದಾರೆ. ಆದರೆ, ಪಟ್ಟಿಯಲ್ಲಿ 9500 ಮತದಾರರಿದ್ದು, ಸುಮಾರು 2500 ರಿಂದ 3000 ನಕಲಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪ್ರಾಮಾಣಿಕ ಮತದಾರರಿದ್ದರೆ ಅಂತಹವರನ್ನು ಪಟ್ಟಿಗೆ ಸೇರ್ಪಡೆ ಮಾಡಲಿ, ನಮ್ಮ ಆಕ್ಷೇಪಣೆಯಿಲ್ಲ. ಸ್ವಂತ ಮನೆ ಇದೆ. ಆದರೆ ಕಳೆದ 20 ವರ್ಷಗಳಿಂದ ವಾಸವಾಗಿರದೇ, ಬೇರೆ ಕಡೆ ವಾಸವಾಗಿದ್ದಾರೆ. ಮತ್ತೆ ಕೆಲವರು ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿದ್ದಾರೆ. ನಕಲಿ ಮತದಾರರನ್ನು ಮಾತ್ರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ ಎಂದು ಅವರು ಹೇಳಿದರು.
ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಮತ ಹಾಕದ ಮತದಾರರು, ಕೇವಲ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮಾತ್ರ ಮತ ಹಾಕಲು ಬರುತ್ತಾರೆ. ಎ. ನಾಗರಾಜ್ ಮತ್ತವರ ಕುಟುಂಬದವರು ಚುನಾವಣೆಗೆ ಸ್ಪರ್ಧಿಸಿದಾಗ ಮಾತ್ರ ಮತ ಪಟ್ಟಿಯಲ್ಲಿ ನಕಲಿ ಮತದಾರರನ್ನು ಸೇರಿಸಲಾಗುತ್ತಿದೆ ಎಂದು ಆರೋಪಿಸಿದರು.
ಎ. ನಾಗರಾಜ್ ಕಳೆದ 15 ವರ್ಷಗಳಿಂದ ನಕಲಿ ಮತದಾರರನ್ನು ಸೃಷ್ಟಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇದೀಗ ನಕಲಿ ಮತದಾರರ ಹೆಸರುಗಳನ್ನು ಡಿಲೀಟ್ ಮಾಡಿದ್ದಾರೆಂದು ವಿನಾಕಾರಣ ಅಮಾಯಕ ಅಧಿಕಾರಿಗಳ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದು ಶ್ರೀನಿವಾಸ್ ದಾಸಕರಿಯಪ್ಪ ತಿಳಿಸಿದರು.
ಸದಸ್ಯತ್ವ ವಜಾಗೊಳಿಸಲಿ: ಪಾಲಿಕೆ ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಗೆಲುವು ಸಾಧಿಸಿರುವ ಎ. ನಾಗರಾಜ್ ಅವರ ಸದಸ್ಯತ್ವವನ್ನು ವಜಾಗೊಳಿಸುವಂತೆ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದರು.
ಚುನಾವಣಾ ಸಂದರ್ಭದಲ್ಲಿ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ, ಅಕ್ರಮವಾಗಿ ಗೆದ್ದಿದ್ದಾರೆ. ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಸ್ಪರ್ಧೆ ಮಾಡಿ ಗೆಲ್ಲಲಿ ಎಂದು ಅವರು ಸವಾಲು ಎಸೆದರು.
ವಿಪಕ್ಷ ಕಚೇರಿ ಜಾಗ ತೆರವುಗೊಳಿಸಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೊರತುಪಡಿಸಿ ಬೇರೆ ಯಾವುದೇ ಪಾಲಿಕೆಗಳಲ್ಲಿ ವಿಪಕ್ಷ ನಾಯಕರಿಗೆ ಪ್ರತ್ಯೇಕ ಕಚೇರಿ ಮತ್ತು ಸಿಬ್ಬಂದಿ ಇರುವುದಿಲ್ಲ. ಆದರೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ವಿಪಕ್ಷ ನಾಯಕರಿಗೆ ಪ್ರತ್ಯೇಕ ಕೊಠಡಿ ಮತ್ತು ಸಿಬ್ಬಂದಿಯನ್ನು ಒದಗಿಸಿರುವುದು ಕಾನೂನು ಬಾಹಿರವಾಗಿದ್ದು, ಕೂಡಲೇ ಕಚೇರಿ ತೆರವುಗೊಳಿಸಿ, ಅಲ್ಲಿನ ಸಿಬ್ಬಂದಿಯನ್ನು ಬೇರೆ ಕಡೆ ನಿಯೋಜಿಸುವಂತೆ ಬಿಜೆಪಿ ಕಾನೂನು ಪ್ರಕೋಷ್ಟದ ರಾಜ್ಯ ಸಮಿತಿ ಸದಸ್ಯ ಎ.ಸಿ. ರಾಘವೇಂದ್ರ ಒತ್ತಾಯಿಸಿದರು.
ಮಹಾನಗರ ಪಾಲಿಕೆ ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ವಾಹನ ನೀಡುವ ಅವಕಾಶವಿಲ್ಲ. ವಾಪಸ್ ಪಡೆಯಬೇಕೆಂಬ ನಾಗರಾಜ್ ಹೇಳಿಕೆ ಸಲ್ಲದು. ಅವರಿಗೆ ಯಾವುದೇ ನೈತಿಕತೆ ಇಲ್ಲ. ಮೊದಲು ಅವರು ವಿಪಕ್ಷ ನಾಯಕರ ಕೊಠಡಿ ತೆರವು ಮಾಡಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಕಾಂತ ರಾಜ್, ಯಲ್ಲಪ್ಪ ಪವಾರ್, ಕಿರಣ್ ಕುಮಾರ್, ಎ.ಎಸ್. ಮಂಜುನಾಥ್, ಕೆ.ಹೆಚ್. ಹಾಲೇಶ್, ಪುನೀತ್, ಮಂಜುನಾಥ್ ಉಪಸ್ಥಿತರಿದ್ದರು.