170 ಎಕರೆ ಭೂಸ್ವಾಧೀನಕ್ಕಾಗಿ ಮರು ಪ್ರಸ್ತಾವನೆ ಸಲ್ಲಿಸಲು ಸಚಿವರ ಸೂಚನೆ

ವಸತಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಯತ್ನ: ಸಂಸದ ಸಿದ್ದೇಶ್ವರ

ದಾವಣಗೆರೆ, ಜ.19- ನಗರದಲ್ಲಿ ಸುಮಾರು 27 ಸಾವಿರ ಜನರು ವಸತಿಗಾಗಿ ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಇವರೆಲ್ಲರಿಗೂ ವಸತಿ ಸೌಲಭ್ಯ ಕಲ್ಪಿಸಲು 170 ಎಕರೆ ಜಮೀನು ಭೂಸ್ವಾಧೀನಕ್ಕಾಗಿ ಮರು ಪ್ರಸ್ತಾವನೆ ಸಲ್ಲಿಸುವಂತೆ ರಾಜ್ಯ ವಸತಿ ಸಚಿವ ವಿ. ಸೋಮಣ್ಣ ಸೂಚಿಸಿದ್ದಾರೆ.

ಮಂಗಳವಾರ ಬೆಂಗಳೂರಿನಲ್ಲಿ ವಸತಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಇವರ ಒತ್ತಾಯದ ಮೇರೆಗೆ 100 ಎಕರೆ ಭೂ-ಸ್ವಾಧೀನಪಡಿಸಿಕೊಳ್ಳಲು ಕೂಡಲೇ ಮರುಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ಹಾಜರಿದ್ದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರಿಗೆ ಸಚಿವರು ಸೂಚಿಸಿದರು.

ಪಾಲಿಕೆ ವ್ಯಾಪ್ತಿಯಲ್ಲಿ ವಸತಿಗಾಗಿ ಅರ್ಜಿ ಸಲ್ಲಿಸಿರುವವರಿಗೆ ವಸತಿ ಸೌಲಭ್ಯ ಕಲ್ಪಿಸಲು ಅಗತ್ಯ ಜಮೀನಿನ ದೃಷ್ಟಿಯಿಂದ ಸಮಸ್ಯೆ  ಜಟಿಲವಾಗಿತ್ತು. ವಸತಿ ರಹಿತರ ಸಮಸ್ಯೆ ಪರಿಹರಿಸಲು ಜಿಲ್ಲಾಧಿಕಾರಿಗಳ ಮುಖಾಂತರ ಸಾಲಕಟ್ಟೆ ಹಾಗೂ ಕೆ.ಬೇವಿನಹಳ್ಳಿ ಸರ್ವೆ ನಂಬರ್‌ನ ಸುಮಾರು 170 ಎಕರೆ ಜಮೀನನ್ನು ಗುರುತಿಸಿ ಭೂಸ್ವಾಧೀನಕ್ಕಾಗಿ ವಸತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.  ಅನುದಾನ ಅಲಭ್ಯತೆಯ ಕಾರಣದಿಂದ 170 ಎಕರೆ ಭೂ-ಸ್ವಾಧೀನದ ವಿಷಯ ನೆನೆಗುದಿಗೆ ಬಿದ್ದಿತ್ತು.

ಇದೀಗ ಸಚಿವರು ಮರು ಪ್ರಸ್ತಾವನೆಗೆ ಸೂಚಿಸಿದ್ದು, ದಾವಣಗೆರೆಯ ವಸತಿ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದು ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಹೇಳಿದ್ದಾರೆ.

ಅಶೋಕ ರಸ್ತೆ ರೈಲ್ವೇ ಗೇಟ್ ಸಮಸ್ಯೆ ಪರಿಹಾರಕ್ಕೆ ಯತ್ನ: ನಗರದ ಅಶೋಕ ಚಿತ್ರಮಂದಿರದ ಬಳಿ ನಿರ್ಮಾಣ ಮಾಡಲುದ್ದೇ ಶಿಸಿರುವ ರೈಲ್ವೇ ಕೆಳಸೇತುವೆ ವಿಷಯಕ್ಕೆ ಸಂಬಂಧಿಸಿದಂತೆ ರೈಲ್ವೆ ಗೇಟ್ ಹತ್ತಿರ ಲಿಮಿಟೆಡ್ ಹೈಟ್ ಸಬ್‌ವೇ ಅನ್ನು ಮೇ ತಿಂಗಳ ಒಳಗಾಗಿ ನಿರ್ಮಾಣ ಮಾಡಿಕೊಡುವುದಾಗಿ ಸಭೆಯಲ್ಲಿ ಹಾಜರಿದ್ದ ರೈಲ್ವೆ ಇಲಾಖೆಯ ಉಪಮುಖ್ಯ ಅಭಿಯಂತರ ದೇವೇಂದ್ರ ಗುಪ್ತ ತಿಳಿಸಿದರು. ಉಳಿದಂತೆ ಪುಷ್ಪಾಂಜಲಿ ಚಿತ್ರಮಂದಿರದ ಎದುರು ಎರಡು ವೆಂಟ್‍ಗಳುಳ್ಳ ಕೆಳಸೇತುವೆ ಹಾಗೂ ರೈಲ್ವೆ ಹಳಿಗೆ ಸಮಾನಾಂತರವಾಗಿ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಭೂ-ಸ್ವಾಧೀನದ ಅವಶ್ಯಕತೆಯಿದೆ. ಖಾಸಗಿಯವರ ಜಮೀನನ್ನು ಸ್ವಾಧೀನಪಡಿಸಿಕೊಂಡರೆ ಮಾತ್ರ ಪರ್ಯಾಯ ರಸ್ತೆ ನಿರ್ಮಾಣ ಮಾಡಲು ಸಾಧ್ಯ ಎನ್ನುವ ವಿಷಯವನ್ನು ಜಿಲ್ಲಾಧಿಕಾರಿಗಳು ಸಭೆಯ ಗಮನಕ್ಕೆ ತಂದರು. 

ರೈಲ್ವೆ ಇಲಾಖೆಯಲ್ಲಿ ಭೂ-ಸ್ವಾಧೀನಕ್ಕಾಗಿ ಅನುದಾನ ಒದಗಿಸಲು ಅವಕಾಶ ಇಲ್ಲ. ರಾಜ್ಯ ಸರ್ಕಾರ ಭೂಮಿ ಒದಗಿಸಿದರೆ ಮಾತ್ರ ಕೆಳಸೇತುವೆ ನಿರ್ಮಾಣ ಮಾಡಬಹುದು ಎನ್ನುವ ವಿಚಾರವನ್ನು ಸಭೆಯ ಗಮನಕ್ಕೆ ರೈಲ್ವೆ ಅಧಿಕಾರಿಗಳು ತಂದರು. ಭೂ-ಸ್ವಾಧೀನಕ್ಕೆ ಅಗತ್ಯವಾದ ಹಣ ನೀಡುವವರು ಯಾರು ಎನ್ನುವ ವಿಷಯ ಸಭೆಯಲ್ಲಿ ಚರ್ಚೆಗೀಡುಮಾಡಿತು. ಕೊನೆಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ ಮೂಲಸೌಲಭ್ಯ ಖಾತೆ ಸಚಿವ ವಿ. ಸೋಮಣ್ಣ ಅವರು, ಭೂ-ಸ್ವಾಧೀನಕ್ಕೆ ಎಷ್ಟು ಬೇಕಾಗಬಹುದು ಎನ್ನುವುದನ್ನು ಪ್ರತ್ಯೇಕವಾಗಿ ಪ್ರಸ್ತಾವನೆ ಸಿದ್ದಪಡಿಸಿ ರೈಲ್ವೆ ಇಲಾಖೆಯವರಿಗೆ ಕೊಡಿ. ರೈಲ್ವೆ ಇಲಾಖೆಯವರು ಭೂ-ಸ್ವಾಧೀನದ ಹಣ ಸೇರ್ಪಡೆ ಮಾಡಿಕೊಂಡು ನಮಗೆ ಅಂದಾಜು ಪಟ್ಟಿ ಸಲ್ಲಿಸಲಿ. ನಾನು ಮತ್ತು ಸಂಸದರು ಸೇರಿಕೊಂಡು ಮುಖ್ಯಮಂತ್ರಿಗಳ ಬಳಿ ಮಾತನಾಡಿ ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಅನುದಾನ ಒದಗಿಸಲು ಮನವಿ ಮಾಡಿಕೊಳ್ಳುತ್ತೇವೆ ಎಂದರು. 

ಒಟ್ಟಾರೆಯಾಗಿ ಸುಮಾರು ನಾಲ್ಕೈದು ದಶಕಗಳ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲು ನಾವೆಲ್ಲರೂ ಸೇರಿಕೊಂಡು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಸಂಸದರು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳಿಗೆ ಮನವಿ ಮಾಡಿದರು.

ಅದೇ ರೀತಿ ತೋಳಹುಣಸೆ ಬಳಿ ರೈಲ್ವೆ ಗೇಟ್‍ಗೆ ಅಡ್ಡಲಾಗಿ ಬೀರೂರು-ಸಮ್ಮಸಗಿ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣ ಮಾಡಿರುವ ಫ್ಲೈ ಓವರ್ ಕೆಳಗೆ ಜನರಿಗೆ ಓಡಾಡಲು ಸಬ್ ವೇ ನಿರ್ಮಾಣ ಮಾಡಬೇಕಾಗಿತ್ತು. ಇದಕ್ಕೆ ಸಂಬಂಧಿಸಿದ 6.75 ಕೋಟಿ ರೂ.ಹಣವನ್ನು ಕೆಶಿಪ್‍ನವರು ರೈಲ್ವೆ ಇಲಾಖೆಗೆ ಡಿಪಾಸಿಟ್ ಮಾಡಿದರೆ, ರೈಲ್ವೆಯವರು ಸಬ್ ವೇ ನಿರ್ಮಾಣ ಮಾಡಿಕೊಡಲಿದ್ದಾರೆ. ಹಣ ಡೆಪಾಸಿಟ್ ಮಾಡಬೇಕು ಎಂದು ಸಂಸದರು ಸಭೆಯಲ್ಲಿ ಉಪಸ್ಥಿತರಿದ್ದ ಲೋಕೋಪಯೋಗಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಹೆಚ್.ಅನಿಲ್‍ಕುಮಾರ್ ರವರಿಗೆ ಮನವಿ ಮಾಡಿದರು. ಈ ಬಗ್ಗೆ ಕೆಶಿಪ್‍ನವರು ನಿಮಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದನ್ನು ಪರಿಗಣಿಸಿ ಅನುದಾನ ಬಿಡುಗಡೆ ಮಾಡಿ ಎಂದರು.

ವಿಧಾನಸೌಧದ ವಸತಿ ಸಚಿವರ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಲೋಕೋಪಯೋಗಿ ಹಾಗೂ ಮೂಲಸೌಲಭ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಚ್. ಅನಿಲ್ ಕುಮಾರ್, ಐಡಿಡಿ ಹೆಚ್ಚುವರಿ ಕಾರ್ಯದರ್ಶಿ ಶ್ರೀಧರಮೂರ್ತಿ, ರೈಲ್ವೆ ಉಪ ಮುಖ್ಯ ಎಂಜಿನಿಯರ್ ದೇವೇಂದ್ರ ಗುಪ್ತಾ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!