ಆನ್‍ಲೈನ್ ಔಷಧ ಖರೀದಿ ತಡೆಗೆ ಆಗ್ರಹ

ಜಿಲ್ಲೆಯ ಔಷಧ ಮಾರಾಟ ಪ್ರತಿನಿಧಿಗಳ ಮನವಿ

ದಾವಣಗೆರೆ, ಜ.19- ಆನ್‍ಲೈನ್ ಔಷಧ ಖರೀದಿಗೆ ತಡೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿವಿಧ ಔಷಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 700ಕ್ಕೂ ಹೆಚ್ಚು ಔಷಧ ಮಾರಾಟ ಪ್ರತಿನಿಧಿಗಳು ಇಂದು ಕೆಲಸದಿಂದ ಹೊರಗುಳಿದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಔಷಧಗಳ ಬೆಲೆ ನಿಯಂತ್ರಣವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ ಬೆಲೆ ನಿಗದಿ ಮಾಡಲು ಖಾಸಗಿ ಸಂಸ್ಥೆಗಳಿಗೆ ಅಧಿಕಾರ ನೀಡಲಾಗಿದೆ. ಔಷಧ ನಿಯಂತ್ರಣ ಕಾಯಿದೆ 2013ರಲ್ಲಿ ಉತ್ಪಾದನಾ ವೆಚ್ಚದ ಮೇಲೆ ನಿಗದಿ ಮಾಡದೇ ಮಾರುಕಟ್ಟೆಯಲ್ಲಿನ ವಿವಿಧ ಕಂಪನಿಗಳ ಔಷಧಗಳ ಸರಾಸರಿ ಚಿಲ್ಲರೆ ದರದ ಮೇಲೆ ನಿಗದಿ ಮಾಡಲಾಗುತ್ತಿದೆ. ಇದರಿಂದ ಔಷಧಗಳ ಬೆಲೆ ಹೆಚ್ಚು ಮಾಡಲು ಕೇಂದ್ರ ಸರ್ಕಾರವು ಔಷಧ ಕಂಪನಿಗಳಿಗೆ ದಾರಿ ಮಾಡಿಕೊಟ್ಟಿದೆ ಎಂದು ಮನವಿಯಲ್ಲಿ ಅಳಲಿಡಲಾಗಿದೆ.

ನಾಲ್ಕು ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ವಾಪಾಸ್‌ ಪಡೆಯಬೇಕು. ಎಲ್ಲಾ ಔಷಧ ಹಾಗೂ ವೈದ್ಯಕೀಯ ಸಾಧನಗಳ ಬೆಲೆಯು ಉತ್ಪಾದನಾ ವೆಚ್ಚದ ಮೇಲೆ ನಿಗದಿಯಾಬೇಕು. ಔಷಧಗಳ ಮತ್ತು ವೈದ್ಯಕೀಯ ಸಾಧನಗಳ ಮೇಲಿನ ಎಲ್ಲಾ ತೆರಿಗೆಗಳನ್ನು ತೆಗೆದು ಹಾಕಬೇಕು. ಔಷಧಗಳ ಮತ್ತು ವೈದ್ಯಕೀಯ ಸಾಧನಗಳ ಮೇಲೆ ಸರಕು ಸೇವಾ ತೆರಿಗೆಯನ್ನು ಹಾಕಬಾರದು. ಔಷಧಗಳನ್ನು ಹಾಗೂ ಲಸಿಕೆ ಉತ್ಪಾದನೆ ಮಾಡುತ್ತಿರುವ ಸಾರ್ವಜನಿಕ ಉದ್ದಿಮೆಗಳನ್ನು ಉಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ಕೆ.ಹೆಚ್. ಆನಂದ್ ರಾಜು, ಜಿಲ್ಲಾ ಕಾರ್ಯದರ್ಶಿ ಎ. ವೆಂಕಟೇಶ್, ಗಿರೀಶ್, ಭರಮಪ್ಪ, ಶ್ರೀಧರ್, ಮಂಜುನಾಥ್, ಹೆಚ್. ರಾಜು, ಪ್ರಶಾಂತ್, ಅಫ್ರೋಜ್ ಸೇರಿದಂತೆ ಇತರರು ಇದ್ದರು.

error: Content is protected !!