ಕೃಷಿ ಇಲಾಖೆಯಿಂದ ರಾಗಿ ಬೆಳೆ ಕ್ಷೇತ್ರೋತ್ಸವ

ಬೆಳೆ ಪರಿವರ್ತನೆಗೆ ಮುಂದಾಗಲು ಶಾಸಕ ರವೀಂದ್ರನಾಥ್ ಸಲಹೆ

ದಾವಣಗೆರೆ, ಜ. 18- ಕೃಷಿ ಇಲಾಖೆ ವತಿಯಿಂದ ಅರಸಾಪುರ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಪ್ರಗತಿಪರ ರೈತ ಮಂಜಾನಾಯ್ಕ ಅವರ ಕ್ಷೇತ್ರದಲ್ಲಿ ರಾಗಿ ಬೆಳೆ  ಕ್ಷೇತ್ರೋತ್ಸವ ನಡೆಸಲಾಯಿತು.

ಶಾಸಕ ಎಸ್.ಎ. ರವೀಂದ್ರನಾಥ್  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭದ್ರಾ ಅಚ್ಚುಕಟ್ಟಿನ ಕೊನೆ ಭಾಗದ ರೈತರು  ಒಂದೇ ಬೆಳೆಗೆ ಅಂಟಿಕೊಳ್ಳದೆ, ಬೆಳೆ ಪರಿವರ್ತನೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು.

ಇಲಾಖೆಯವರು  ಭತ್ತದ ಬೆಳೆ ಹೊರತುಪಡಿಸಿ ಇತರೆ ಬೆಳೆಗಳ ಬಗ್ಗೆ ರೈತರಿಗೆ ತರಬೇತಿ ನೀಡುವ ಜೊತೆಗೆ ಜಾಗೃತಿ ಮೂಡಿಸಬೇಕು. ರಾಜ್ಯದ ಬೇರೆ ಭಾಗದ ರೈತರು ಇಲ್ಲಿಗೆ ಬಂದು ನೋಡುವಂತೆ ರಾಗಿ, ಜೋಳ ಹಾಗೂ ವಿವಿಧ ಸಿರಿಧಾನ್ಯದ ಬೆಳೆಗಳನ್ನು ಬೆಳೆಯಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ತುಂತುರು ನೀರಾವರಿ ಘಟಕಗಳನ್ನು ಮತ್ತು ಸಾವಯವ ಗೊಬ್ಬರ, ದ್ರವರೂಪದ ಗೊಬ್ಬರ, ಕೀಟನಾಶಕ ಮತ್ತು ರೋಗ ನಾಶಕಗಳನ್ನು ವಿತರಿಸಲಾಯಿತು.

ರಾಗಿ ಬೆಳೆಗಾರರ ಅಪೇಕ್ಷೆಯಂತೆ ಬೆಂಬಲ ಬೆಲೆಯಡಿ ಪ್ರತಿ ರೈತರಿಗೆ 20 ಕ್ವಿಂಟಾಲ್ ಬದಲಿಗೆ 50 ಕ್ವಿಂಟಾಲ್ ವರೆಗೆ ಖರೀದಿ ಕೇಂದ್ರಕ್ಕೆ ಬಿಡಲು ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ರೈತರಿಗೆ ಭರವಸೆ ನೀಡಿದರು.

ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ತಾಂತ್ರಿಕ ಉಪನ್ಯಾಸ ನೀಡಿ, ಈ ಭಾಗದ ರೈತರು ಭತ್ತದ ಬದಲಾಗಿ ಸುಮಾರು 250 ಎಕರೆ ಕ್ಷೇತ್ರವನ್ನು ರಾಗಿ ಬೆಳೆಯಾಗಿ ಪರಿವರ್ತನೆ ಮಾಡಿರುವುದು ಶ್ಲ್ಯಾಘನೀಯ ಎಂದರು

ಉಪ ಕೃಷಿ ನಿರ್ದೇಶಕ ಡಾ. ತಿಪ್ಪೇಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ. ಪಂ. ಅಧ್ಯಕ್ಷೆ ಮಂಜುಳಾಬಾಯಿ ಸೇವ್ಯಾನಾಯ್ಕ  ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಶಾಂತಿಬಾಯಿ ಹನುಮಂತನಾಯ್ಕ, ಸತ್ಯಬಾಬು, ರೂಪ ಧನ್ಯಕುಮಾರ್, ಮಂಜಿಬಾಯಿ ಪಾಪನಾಯ್ಕ, ನೀರು ಬಳಕೆದಾರರ ಸಂಘದ ಅಧ್ಯಕ್ಷ ಜಿ. ಹೆಚ್. ರವಿಕುಮಾರ್, ಸಹಾಯಕ ಕೃಷಿ ನಿರ್ದೇಶಕ ರೇವಣಸಿದ್ಧನಗೌಡ ಹೆಚ್.ಕೆ. ಇತರರಿದ್ದರು.

error: Content is protected !!