ವಾಲ್ಮೀಕಿ ಜಾತ್ರೆ ಮುಂದೂಡಿಕೆಗೆ ರಾಜನಹಳ್ಳಿ ಶ್ರೀಗೆ ಡಿಸಿ ಮನವಿ

ರಾಜನಹಳ್ಳಿ ಮಠಕ್ಕೆ ಭೇಟಿ ನೀಡಿದ್ದ ಮಹಾಂತೇಶ್ ಬೀಳಗಿ

ಮಲೇಬೆನ್ನೂರು, ಜ.16- ರಾಜನ ಹಳ್ಳಿಯ ವಾಲ್ಮೀಕಿ ಗುರುಪೀಠಕ್ಕೆ ಭಾನುವಾರ ಸಂಜೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂ ತೇಶ್ ಬೀಳಗಿ ಅವರು ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 4ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮುಂದೂಡುವಂತೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರಲ್ಲಿ ಮನವಿ ಮಾಡಿದರು.

ಈಗಾಗಲೇ ಹರಜಾತ್ರೆ, ತರಳಬಾಳು ಹುಣ್ಣಿಮೆ ಮತ್ತು ಸಂತ ಸೇವಾಲಾಲ್ ಜಯಂತಿಯನ್ನೂ ಮುಂದೂಡಲಾಗಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ಎಲ್ಲಾ ಕಡೆ ಕೊರೊನಾ ಸೋಂಕು ಅತಿ ವೇಗದಲ್ಲಿ ಹರಡುತ್ತಿರುವುದರಿಂದ ಫೆಬ್ರವರಿ ತಿಂಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದ್ದರಿಂದ ಫೆ. 8 ಮತ್ತು 9 ರಂದು ಹಮ್ಮಿಕೊಂಡಿರುವ 4ನೇ ವರ್ಷದ ವಾಲ್ಮೀಕಿ ಜಾತ್ರೆಯನ್ನು ಮುಂದೂಡಿ, ಕೊರೊನಾ ವಿರುದ್ಧದ ಹೋರಾಟದಲ್ಲಿ ಹಿಂದಿನಂತೆ ಈಗಲೂ ನಮಗೆ ಬೆಂಬಲ ಕೊಡಿ ಎಂದು ಜಿಲ್ಲಾಧಿಕಾರಿ ಬೀಳಗಿ ಅವರು ಸ್ವಾಮೀಜಿ ಅವರಿಗೆ ಕೇಳಿದರು.

ವಾಲ್ಮೀಕಿ ಜಾತ್ರೆಗೆ ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಜನ ಭಾಗವಹಿಸುತ್ತಾರೆ. ಹಾಗಾಗಿ ಜನರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸರ್ಕಾರದ ಸೂಚನೆಯಂತೆ ಜಾತ್ರೆಯನ್ನು ಮುಂದೂಡುವ ಬಗ್ಗೆ ಫೆ. 1 ರಂದು ಜಾತ್ರಾ ಸಮಿತಿ ಸಭೆ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಸ್ವಾಮೀಜಿ ಅವರು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.

ಇದೇ ವೇಳೆ ಮಠದಲ್ಲಿ ಆವರಣದಲ್ಲಿ ಜೋಡಣೆಗೊಳ್ಳುತ್ತಿರುವ ರಿಮೋಟ್ ಕಂಟ್ರೋಲ್‌ನ  6 ಬೃಹತ್ ಗಾಲಿಗಳನ್ನು ಹೊಂದಿರುವ ನೂತನ ತೇರನ್ನು ಜಿಲ್ಲಾಧಿಕಾರಿಗಳು ಪರೀಕ್ಷೆ ಮಾಡಿ, ರಾಜ್ಯದಲ್ಲೇ ಅತಿ ದೊಡ್ಡ ತೇರು ಇದಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿರಹಟ್ಟಿ ಮಾಜಿ ಶಾಸಕ ರಾಮಕೃಷ್ಣ ದೊಡ್ಮನಿ, ಅರಣ್ಯ ನಿಗಮದ ಮಾಜಿ ಅಧ್ಯಕ್ಷ ಟಿ.ಈಶ್ವರ್, ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್, ದಾವಣಗೆರೆ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ತಹಶೀಲ್ದಾರ್ ಕೆ.ಬಿ.ರಾಮಚಂದ್ರಪ್ಪ, ತಾಲ್ಲೂಕು ಹಿರಿಯ ಆರೋಗ್ಯ ವಿಸ್ತರಣಾಧಿಕಾರಿ ಎಂ.ಉಮಣ್ಣ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿ.ಆನಂದಪ್ಪ, ತಾ. ನಾಯಕ ಸಮಾಜದ ಅಧ್ಯಕ್ಷ ಕೆ.ಆರ್.ರಂಗಪ್ಪ, ಮಠದ ಧರ್ಮದರ್ಶಿ ಕೆ.ಬಿ.ಮಂಜುನಾಥ್, ನಗರಸಭೆ ಸದಸ್ಯ ದಿನೇಶ್ ಬಾಬು, ಮಾರುತಿ ಬೇಡರ್, ಗೌರಮ್ಮ ಮಂಜುನಾಥ್, ಮಕರಿ ಪಾಲಾಕ್ಷಪ್ಪ, ಕೊಕ್ಕನೂರಿನ ಡಿ.ಸೋಮಶೇಖರ್, ರಾಜನಹಳ್ಳಿ ಭೀಮಣ್ಣ, ಹರಿಹರದ ರಾಜು, ಕೆ.ಬೇವಿನಹಳ್ಳಿ ಹಾಲೇಶ್, ಹರಪನಹಳ್ಳಿ ತಾಲ್ಲೂಕು ಮುಖಂಡರಾದ ಶ್ರೀಮತಿ ಎಂ.ಪಿ.ಲತಾ ಮಲ್ಲಿಕಾರ್ಜುನ್, ತಾಲ್ಲೂಕು ನಾಯಕ ಸಮಾಜದ ಅಧ್ಯಕ್ಷ ಉಚ್ಚೆಂಗಪ್ಪ, ಪತ್ರಕರ್ತ ಜಿಗಳಿ ಪ್ರಕಾಶ್ ಮತ್ತಿತರರು ಈ ವೇಳೆ ಹಾಜರಿದ್ದರು.

error: Content is protected !!