ರಾಣೇಬೆನ್ನೂರು, ಜ.16- ಜಗತ್ತಿಗೆ ಬೆಳಕು ಚಲ್ಲುವ ಸೂರ್ಯನು ಸಂಕ್ರಾಂತಿಯ ಪರ್ವ ಕಾಲದಲ್ಲಿ ಹೇಗೆ ತನ್ನ ಪಥವನ್ನು ಬದಲಾಯಿಸಿ ಸಮಸ್ತ ಜೀವ ಸಂಕುಲಕ್ಕೆ ಲೇಸು ಬಯಸುತ್ತಾನೆಯೋ ಹಾಗೆಯೇ ಜೀವ ರಾಶಿಗಳಲ್ಲೇ ಅತಿ ಬುದ್ದಿವಂತನಾಗಿರುವ ಈ ಮನುಜನು ಸಹ ತನ್ನ ಅಹಂಕಾರ, ಮದ, ಮತ್ಸರ, ಕ್ರೋಧಗಳ ಜೊತೆಗೆ ಅನೇಕ ದುಶ್ಚಟಗಳನ್ನು ಬಿಟ್ಟು ಸನ್ಮಾರ್ಗದ ಪಥದತ್ತ ಮುನ್ನಡೆದರೆ ಆತನ ಜೀವನ ಬದುಕಿನುದ್ದಕ್ಕೂ ಪಾವನವಾಗುತ್ತದೆ ಎಂದು ಕಾಶಿ ಪೀಠದ ಜಗದ್ಗುರು ಶ್ರೀ ಡಾ. ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ನಗರದ ಹೊರ ವಲಯದಲ್ಲಿರುವ ಹಿರೇಮಠದ ಶನೈಶ್ಚರಸ್ವಾಮಿ ಮಂದಿರದಲ್ಲಿ ಮಕರ ಸಂಕ್ರಾಂತಿ ದಿನದಂದು ಶನೈಶ್ಚರಸ್ವಾಮಿಗೆ ವಿಶೇಷ ಅಭಿಷೇಕ ಮತ್ತು ಮಹಾಪೂಜೆ ನೆರವೇರಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಸೂರ್ಯನು ಮಿಥುನ ರಾಶಿಯನ್ನು ದಾಟಿ ಮಕರ ರಾಶಿಯನ್ನು ಪ್ರವೇಶಿಸುವ ಸಂಧಿಕಾಲದ ಈ ಶುಭ ಕಾಲವನ್ನೇ ಸಂಕ್ರಾಂತಿ ಹಾಗೂ ‘ಮಕರ ಸಂಕ್ರಮಣ’ ಸಂಕ್ರಾಂತಿಯ ಪರ್ವ ಉತ್ತರಾಯಣ ಪುಣ್ಯಕಾಲ ಎಂದೂ ಸಹ ಬೇರೆ ಬೇರೆ ಭಾಗಗಳಲ್ಲಿ ಕರೆಯುವುದರ ಜೊತೆಗೆ ರೈತ ಸಮುದಾಯದವರು ಹಾಗೂ ಶ್ರೀಸಾಮಾನ್ಯರು ಅಂದು ವಿಶೇಷ ಪೂಜೆ ಮಾಡಿ ಮತ್ತು ಸುಗ್ಗಿಯ ಹಬ್ಬವನ್ನಾಗಿ ಆಚರಿಸುವ ಮೂಲಕ ಎಳ್ಳು-ಬೆಲ್ಲ ವಿತರಿಸಿ ಜೀವನ ಉತ್ತಮವಾಗಿರಲಿ ಎಂದು ಒಬ್ಬರಿಗೊಬ್ಬರು ಶುಭ ಹಾರೈಸುವುದು ಸಂಕ್ರಾಂತಿಯ ಸಂಪ್ರದಾಯವಾಗಿದೆ ಎಂದು ಕಾಶಿ ಶ್ರೀಗಳು ಹೇಳಿದರು.
ಶ್ರೀಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶನೈಶ್ಚರಸ್ವಾಮಿಯ ವಾರದ ದಿನವಾದ ಶನಿವಾರದಂದೇ ಈ ಬಾರಿ ಮಕರ ಸಂಕ್ರಾಂತಿಯು ಸಹ ಬಂದಿರುವುದು ಬಹಳಷ್ಟು ಶ್ರೇಷ್ಠವಾಗಿದೆ.
ಸಮಸ್ತ ಮನುಜ ಹಾಗೂ ಜೀವ ಕುಲಕ್ಕೆ ಶನೈಶ್ಚರನು ಒಳಿತನ್ನು ಮಾಡಲಿ, ಸುಖ, ಸಮೃದ್ದಿ ದಯಪಾಲಿಸಲಿ ಎಂದು ಶ್ರೀಗಳು ಶುಭ ಹಾರೈಸಿದರು.
ಹಾಲೇಶಪ್ಪ ಗೌಳಿ, ಎ.ಎಂ. ಕೊಟ್ರೇಶ, ಪುನೀತ, ಗುದ್ಲೇಶ್ವರ, ಪರಮೇಶ್ವರ, ಸಚ್ಚಿದಾನಂದ ಶಾಸ್ತ್ರೀಗಳು ಮತ್ತು ಇತರರು ಉಪಸ್ಥಿತರಿದ್ದರು.