ಜಿಲ್ಲಾಸ್ಪತ್ರೆ ನವೀಕರಣಕ್ಕೆ ಸಚಿವ ಭೈರತಿ ಸೂಚನೆ

ದಾವಣಗೆರೆ, ಜ.13- ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ್ ನಗರದ ಜಿಲ್ಲಾಸ್ಪತ್ರೆಗೆ ಇಂದು ಭೇಟಿ ನೀಡಿ, ಕೋವಿಡ್ ಮೂರನೇ ಅಲೆ ಹಿನ್ನೆಲೆ ಸಿದ್ದವಾಗಿರುವ ಬೆಡ್‍ಗಳ ವ್ಯವಸ್ಥೆಯನ್ನು ಪರಿಶೀಲಿಸಿದರು. 

ಕಬ್ಬಿಣವುಳ್ಳ ಬೆಡ್‌ಗಳ ಬದಲಿಗೆ ಆಸ್ಪತ್ರೆಯಲ್ಲಿ ನವೀಕೃತ ಬೆಡ್ ಗಳ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಸಚಿವ ಭೈರತಿ ಬಸವರಾಜ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳೊಂದಿಗೆ ಚರ್ಚಿಸುತ್ತಾ, ನಮ್ಮ ಕಾಲದಲ್ಲಾದರೂ ಜಿಲ್ಲಾಸ್ಪತ್ರೆ ನವೀಕರಣವಾಗಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಅನುದಾನ ಮಂಜೂರಾದ ತಕ್ಷಣವೇ ಆಸ್ಪತ್ರೆಯಲ್ಲಿ ನವೀಕೃತ ಬೆಡ್ ವ್ಯವಸ್ಥೆ ಕಲ್ಪಿಸುವ ಕೆಲಸ ಮಾಡುವುದಾಗಿ ಹೇಳಿದರು.

ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ: 2 ಸಾವಿರ ಲೀಟರ್ ಮತ್ತು ಒಂದು ಸಾವಿರ ಲೀಟರ್ ಸಾಮರ್ಥ್ಯದ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸಚಿವ ಭೈರತಿ ಬಸವರಾಜ್ ಉದ್ಘಾಟಿಸಿದರು. ಇವುಗಳ ಸೂಕ್ತ ನಿರ್ವಹಣೆ ಮುಖಾಂತರ ಕೋವಿಡ್ ಸೋಂಕಿತರ ಆರೋಗ್ಯ ಸುಧಾರಣೆಗೆ ಅಡಚಣೆಯಾಗದಂತೆ ಕಾರ್ಯನಿರ್ವಹಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪಂಚಾಯತ್ ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್ ಸೇರಿದಂತೆ, ಆರೋಗ್ಯ ಅಧಿಕಾರಿಗಳು ಇದ್ದರು.

error: Content is protected !!