ದಾವಣಗೆರೆ, ಜ.12- ವೇತನ ಹೆಚ್ಚಿಸುವಂತೆ ಒತ್ತಾಯಿಸಿ ಬಿಸಿಯೂಟ ತಯಾರಕರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ತಾಲ್ಲೂಕು ಕಚೇರಿ ಮುಂಭಾಗ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನ ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಜಮಾಯಿಸಿದ್ದ ಬಿಸಿಯೂಟ ತಯಾರಕರು, ತಮಗೆ 2021-22 ರ ಬಜೆಟ್ ನಲ್ಲಿ ವೇತನ ಹೆಚ್ಚಿಸುವಂತೆ ಉಪತಹಸೀಲ್ದಾರ್ ಮುಖೇನ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಬಿಸಿಯೂಟ ತಯಾರಕರು ಕಳೆದ ಹತ್ತೊಂಬತ್ತು ವರ್ಷಗಳಿಂದ ಕನಿಷ್ಠ ವೇತನ ಇಲ್ಲದೆ ಗೌರವ ಸಂಭಾವನೆ ಪಡೆದು ದುಡಿಯುತ್ತಿರುವುದರಿಂದ ಜೀವನ ನಿರ್ವಹಿಸಲು ಕಷ್ಟವಾಗುತ್ತಿದೆ. ಆದ್ದರಿಂದ 2021-22 ರ ಬಜೆಟ್ ನಲ್ಲಿ ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿದರು.
ಬಿಸಿಯೂಟ ತಯಾರಕರಿಗೆ ಕನಿಷ್ಠ 21 ಸಾವಿರ ವೇತನ ಜಾರಿಗೊಳಿಸಬೇಕು. ಉತ್ತರ ಪ್ರದೇಶ ರಾಜ್ಯದ ಅಲಹಾಬಾದ್ ಹೈಕೋರ್ಟ್ ಆದೇಶದಂತೆ ಅವರ ಕೆಲಸ ಖಾಯಂಗೊಳಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಬಿಸಿಯೂಟ ತಯಾರಿಕೆ ಯೋಜನೆ ಎನ್ನುವುದನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮ ಎಂದು ಮಾರ್ಪಡಿಸಬೇಕು. 60 ವರ್ಷ ವಯೋಮಾನ ಮೀರಿ ನಿವೃತ್ತಿಯಾದವರಿಗೆ 2 ಲಕ್ಷ ರೂ. ಇಡಿಗಂಟು ನೀಡಬೇಕು ಮತ್ತು ಮಾಸಿಕ ನಿವೃತ್ತಿ ಪಿಂಚಣಿ 3 ಸಾವಿರ ರೂ. ಜಾರಿಗೊಳಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಿಸಿಯೂಟ ತಯಾರಕರ ತಾಲೂಕು ಸಮಿತಿ ಅಧ್ಯಕ್ಷೆ ಮಳಲಕೆರೆ ಜಯಮ್ಮ, ಕಾರ್ಯದರ್ಶಿ ಜ್ಯೋತಿಲಕ್ಷ್ಮಿ, ಖಜಾಂಚಿ ಪದ್ಮಾ, ಜಿಲ್ಲಾ ಸಮಿತಿ ಉಪಾಧ್ಯಕ್ಷೆ ಸರೋಜಾ, ಜಿಲ್ಲಾ ಸಂಚಾಲಕ ಸಿ. ರಮೇಶ್, ಮುಖಂಡರಾದ ನರೇಗಾ ರಂಗನಾಥ್, ಪರಶುರಾಮ್, ವನಜಾಕ್ಷಮ್ಮ, ಶೋಭಾ, ಪಾರ್ವತಿಬಾಯಿ, ಮಂಜುಳ ಸೇರಿದಂತೆ ಇತರರು ಭಾಗವಹಿಸಿದ್ದರು.