ಭರಮಸಾಗರ-ತುಪ್ಪದಹಳ್ಳಿ ಕೆರೆಗಳಿಗೆ ಸಮೃದ್ಧ ನೀರು

ತರಳಬಾಳು ಜಗದ್ಗುರುಗಳು ಸಂತಸ

ಸಿರಿಗೆರೆ, ಜ.11- ಏತನೀರಾವರಿ ಯೋಜನೆ ಅಡಿಯಲ್ಲಿ ತುಂಗಭದ್ರಾ ನದಿಯ  ನೀರಿನಿಂದ ಒಂದು ಸಾವಿರ ಎಕರೆ ವಿಸ್ತೀರ್ಣದ ಭರಮಸಾಗರದ ದೊಡ್ಡಕೆರೆ ತುಂಬಿರುವುದಕ್ಕೆ ಸಿರಿಗೆರೆ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಅಪಾರ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕೆರೆಯ ಕೋಡಿಯಿಂದ   ಹೊರಹೋಗುತ್ತಿರುವ ನೀರು ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಗೆ ಹರಿಯುತ್ತಿದೆ. ಹಳ್ಳದಲ್ಲಿ  ಭೋರ್ಗರೆದು ಧುಮ್ಮಿಕ್ಕುತ್ತಿರುವ ನೀರಿನ  ಆಕರ್ಷಕ ದೃಶ್ಯ ರೈತರ ಮೊಗದಲ್ಲಿ ಹರ್ಷ ತಂದಿದೆ .  ದೇವರ ಕೃಪೆಯಿಂದ ಮೂರು ವರ್ಷಗಳ ಪ್ರಯತ್ನ ಸಾರ್ಥಕವಾಗಿದೆ ಎಂದು ಶ್ರೀಗಳು ಅಭಿಪ್ರಾಯ ಪಟ್ಟಿದ್ದಾರೆ.

ತುಪ್ಪದಹಳ್ಳಿ ಕೆರೆಯು 1200 ಎಕರೆ ವಿಸ್ತೀರ್ಣ ಹೊಂದಿದೆ. ಭರಮಸಾಗರಕ್ಕಿಂತಲೂ ಹೆಚ್ಚಿನ ನೀರು ಸಂಗ್ರಹವಾಗುವ ಸಾಮರ್ಥ್ಯವಿದೆ.  18ಅಡಿ ಆಳವಿರುವ ಈ ಕೆರೆಗೆ ಈ ಸಲ  ಮಳೆಯಿಂದಲೂ ಸಾಕಷ್ಟು  ನೀರು ಬಂದಿದೆ. ಜೊತೆಗೆ   ಭರಮಸಾಗರ ಕೆರೆಯ ಕೋಡಿಯಿಂದಲೂ ಹರಿಯುತ್ತಿರುವ ನೀರಿನಿಂದ ಈಗಾಗಲೇ  12 ಅಡಿಯಷ್ಟು ನೀರು ತುಂಬಿದೆ.  ಈಗ ಕಣ್ಣಾಯಿಸಿದಷ್ಟು ದೂರದೂರಕೆ  ನೀರಿನ ಹರಿವು ಕಾಣುತ್ತಿದ್ದು, ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಶ್ರೀಗಳು ಸುದ್ದಿಗಾರರೊಂದಿಗೆ ಮಾತನಾಡಿದರು.

13ರಂದು ಎರಡೂ  ಕೆರೆಗಳಿಗೆ ಶ್ರೀಗಳ ಭೇಟಿ: ತುಂಬಿ ತುಳುಕುತ್ತಿರುವ  ಭರಮಸಾಗರ ದೊಡ್ಡ ಕೆರೆಯ ನಯನ ಮನೋಹರ ದೃಶ್ಯವನ್ನು ಕಣ್ತುಂಬಿಕೊಳ್ಳುವ ಕಾತುರ ಶ್ರೀಗಳವರದು. ಆದುದರಿಂದ ಶ್ರೀತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಇದೇ ತಿಂಗಳ ಮೂರರ ಗುರುವಾರದಂದು ಬೆಳಗ್ಗೆ 11ಕ್ಕೆ ಭರಮಸಾಗರ ಕೆರೆಯ ವೀಕ್ಷಣೆಗಾಗಿ ಆಗಮಿಸುತ್ತಿದ್ದಾರೆ. ಅಲ್ಲಿಂದ ಮುಂದೆ   ಬಿಳಿಚೋಡು ಮಾರ್ಗವಾಗಿ ತುಪ್ಪದಳ್ಳಿ ಕೆರೆಗೆ ತೆರಳುವರು. ಅಲ್ಲಿ ಕೆರೆಯನ್ನು ವೀಕ್ಷಿಸಿ, ಅಭಿವೃದ್ಧಿ ಕಾರ್ಯಗಳನ್ನು ಕುರಿತು ಚರ್ಚಿಸುವರು. ಈ ಸಂದರ್ಭದಲ್ಲಿ ಜಗಳೂರು    ಶಾಸಕ ಎಸ್ ವಿ ರಾಮಚಂದ್ರಪ್ಪ, ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ, ಏತ ನೀರಾವರಿಯ ಮುಖ್ಯ ಎಂಜಿನಿಯರ್ ಮಲ್ಲಪ್ಪನವರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಭಾಗವಹಿಸುವರು.  ಎಂದು ಬೃಹನ್ಮಠದ ಕಾರ್ಯದರ್ಶಿ ಪತ್ರಿಕೆ ಹೇಳಿಕೆ ನೀಡಿದ್ದಾರೆ. 

error: Content is protected !!