ಹರಿಹರದಲ್ಲಿ ಎರಡು ದಿನಗಳ ಕುಸ್ತಿ ಪಂದ್ಯಾವಳಿಗೆ ಕಾಗಿನೆಲೆ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಚಾಲನೆ
ಹರಿಹರ, ಜ.19 – ಕುಸ್ತಿಯಿಂದ ದೇಹ ಸದೃಢಗೊಳ್ಳುವದರ ಜೊತೆಗೆ ಉತ್ತಮ ಆರೋಗ್ಯ ಹಾಗೂ ಮಾನಸಿಕ ನೆಮ್ಮದಿ ಗಳಿಸಬಹುದು ಎಂದು ಕಾಗಿನಲೆ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ರಾಜ್ಯ ಕುಸ್ತಿ ಸಂಘ ಮತ್ತು ಹರಿಹರದ ಕುಸ್ತಿ ಜೀರ್ಣೋದ್ಧಾರ ಸಮಿತಿ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಹೊನಲು ಬೆಳಕಿನ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಶ್ರೀ ಹರಿಹರೇಶ್ವರ ದೇವಾಲಯದ ಆವರಣದಿಂದ ಮೈದಾನಕ್ಕೆ ಕ್ರೀಡಾ ಜೋತಿಯನ್ನು ಅದ್ದೂರಿ ಮೆರವಣಿಗೆ ಮೂಲಕ ತರಲಾಗಿತ್ತು.
ದೇಶದಲ್ಲಿ ಕುಸ್ತಿ ಕ್ರೀಡೆಗೆ ತನ್ನದೇ ಆದ ಇತಿಹಾಸವಿದೆ. ರಾಜ ಮಹಾರಾಜರ ಕಾಲದಲ್ಲಿ ಕುಸ್ತಿ ಕ್ರೀಡಾಪಟುಗಳಿಗೆ ಬಹಳ ದೊಡ್ಡ ರೀತಿಯಲ್ಲಿ ಗೌರವ ಸ್ಥಾನಮಾನ ನೀಡಿ ಗೌರವಿಸಲಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿಯಿಂದ ಕುಸ್ತಿ ನಶಿಸಿ ಹೋಗುತ್ತಿವೆ. ಮೊಬೈಲ್ ಇಲ್ಲದಿದ್ದರೆ ಜೀವನ ಸಾಧ್ಯವಿಲ್ಲ ಎನ್ನುವಷ್ಟು ಮೊಬೈಲ್ ದಾಸರಾಗಿದ್ದಾರೆ ಎಂದು ಶ್ರೀಗಳು ವಿಷಾದಿಸಿದರು.
ಕುಸ್ತಿಯಿಂದ ಮಾನಸಿಕ ನೆಮ್ಮದಿ, ಸದೃಢ ಆರೋಗ್ಯ, ಮತ್ತು ಮನಸ್ಸು ಹಿಡಿತದಲ್ಲಿ ಇಟ್ಟುಕೊಳ್ಳಲು ದಾರಿಯಾಗುತ್ತದೆ. ಆಗಾಗಿ ಮಕ್ಕಳು ಮೊಬೈಲ್ ದಾಸರಾಗದೆ ಕುಸ್ತಿ ಸೇರಿದಂತೆ ಎಲ್ಲಾ ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಆರೋಗ್ಯವಂತ ಜೀವನವನ್ನು ನಡೆಸಬೇಕೆಂದು ಅವರು ಕರೆ ನೀಡಿದರು.
ಶಾಸಕ ಎಸ್. ರಾಮಪ್ಪ ಮಾತನಾಡಿ, ಕುಸ್ತಿ ಅತ್ಯಂತ ಕಠಿಣ ಕ್ರೀಡೆ. ಇದನ್ನು ಕರಗತ ಮಾಡಿ ಕೊಳ್ಳುವುದು ಸುಲಭವಲ್ಲ. ತಾಳ್ಮೆ, ಜಾಣ್ಮೆ ಚಾಕಚಕ್ಯತೆ ಇದ್ದವರು ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ತಿಳಿಸಿದರು. ಹಿಂದೆ ಕುಸ್ತಿ ಪಟುಗಳು ಗರಡಿ ಮನೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ದೈಹಿಕ ಕಸರತ್ತು ನಡೆಸುತ್ತಿದ್ದರು. ಆದರೆ, ಇವಾಗ ಹೆಚ್ಚು ಜಿಮ್ ಕಡೆ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ದೈಹಿಕ ಕಸರತ್ತು ಗರಡಿಯಲ್ಲಿ ಕಲಿತಷ್ಟು ಜಿಮ್‌ನಲ್ಲಿ ಆಗದು ಎಂದವರು ಅಭಿಪ್ರಾಯ ಪಟ್ಟರು.
ಈ ಸಂದರ್ಭದಲ್ಲಿ ಕುಸ್ತಿ ಪಂದ್ಯದ ವ್ಯವಸ್ಥಾಪಕ ನಂದಿಗಾವಿ ಶ್ರೀನಿವಾಸ್, ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ವಕೀಲ ಎಂ. ನಾಗೇಂದ್ರಪ್ಪ, ಸುರೇಶ್ ಚಂದಪೂರ್, ರೇವಣಪ್ಪ, ಜಗದೀಶ್ ಚೂರಿ, ನಾರಾಯಣ, ಸೈಯದ್ ಆಸೀಫ್, ಸುಚೇತ್ ಮತ್ತಿತರರು ಉಪಸ್ಥಿತರಿದ್ದರು.