ಮುನ್ನೆಚ್ಚರಿಕೆ ಡೋಸ್‌ಗೆ ಚಾಲನೆ

ದಾವಣಗೆರೆ, ಜ.10- ಜಿಲ್ಲೆಯಲ್ಲಿನ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೊವೀಡ್ 19 ಮುನ್ನೆಚ್ಚರಿಕೆ  (ಬೂಸ್ಟರ್) ಡೋಸ್ ನೀಡುವ ಕಾರ್ಯಕ್ರಮಕ್ಕೆ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಸಂಸದರು, ಶಾಸಕರೊಟ್ಟಿಗೆ ಸೋಮವಾರ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್,  ಜಿಲ್ಲೆಯಲ್ಲಿ 11,800 ಜನರಿಗೆ  ಬೂಸ್ಟರ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಅನೇಕರು ಇನ್ನೂ 2ನೇ ಡೋಸ್ ಲಸಿಕೆ  ಪಡೆದಿಲ್ಲ. ಎಲ್ಲರೂ ನಿರ್ಲಕ್ಷ್ಯ ಮಾಡದೆ ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ಕೋವಿಡ್ ಬಂದರೂ ಜೀವಕ್ಕೆ ಅಪಾಯವಾಗುವುದಿಲ್ಲ ಎಂದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ 16,000 ಮುಂಚೂಣಿ ಕಾರ್ಯಕರ್ತರಿಗೆ ಮತ್ತು 16,000 ಆರೋಗ್ಯ ಕಾರ್ಯಕರ್ತರು ಒಟ್ಟು 32,000 ಜನರು. ಮತ್ತು ಇವರೊಟ್ಟಿಗೆ 60 ವರ್ಷ ಮೇಲ್ಪಟ್ಟ  40,000 ಜನರನ್ನೂ ಸೇರಿ  72 ಸಾವಿರ  ಜನರನ್ನು ಬೂಸ್ಟರ್ ಡೋಸ್ ಲಸಿಕೆಗೆ ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆ ಮತ್ತು ತಾಲ್ಲೂಕಿನಲ್ಲಿ 11,800 ಜನರಿಗೆ ಹಂತ ಹಂತವಾಗಿ ಪ್ರತಿಯೊಬ್ಬರಿಗೂ ಲಸಿಕೆ ನೀಡಲಾಗುವುದು. ಆರೋಗ್ಯ ಕಾರ್ಯಕರ್ತರು ಈ ಮುಂಚೆ ಕೋವ್ಯಾಕ್ಸಿನ್ ಪಡೆದಿದ್ದರೆ, ಅವರಿಗೆ ಕೋವ್ಯಾಕ್ಸಿನ್ ನೀಡಲಾಗುತ್ತದೆ. ಕೋವಿಶೀಲ್ಡ್ ಪಡೆದು 9 ತಿಂಗಳು ಪೂರ್ಣಗೊಂಡವರನ್ನು ಹುಡುಕಿ ಕೋವಿಶೀಲ್ಡ್ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ತಮಿಳುನಾಡು ಮತ್ತು ಬೆಂಗಳೂರಿನಿಂದ ಜಿಲ್ಲೆಗೆ ಮರಳಿದ ಸುಮಾರು 30 ಜನರನ್ನು ಗುರುತಿಸಿ ಪರೀಕ್ಷಿಸಿದಾಗ ಅವರಿಗೆ ಪಾಸಿಟಿವ್ ಲಕ್ಷಣ ಕಂಡು ಬಂದಿದೆ. ಅವರನ್ನು ಐಸೋಲೇಷನ್‍ನಲ್ಲಿ ಇರಿಸಲಾಗಿದೆ. ಜನರು ಆರೋಗ್ಯದ ಹಿತದೃಷ್ಟಿಯಿಂದ ಪ್ರವಾಸಗಳನ್ನು ಮುಂದೂಡಬೇಕು ಎಂದು ಮನವಿ ಮಾಡಿದ ಅವರು, ಶಬರಿ ಮಲೈಗೆ ಹೋಗಿ ಬಂದವರು ಸ್ವಯಂ ಪ್ರೇರಿತರಾಗಿ ಪರೀಕ್ಷೆಗೆ ಒಳಗಾಗಿ ತಮ್ಮನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರಿಗೂ ಸೋಂಕು ಹರಡದಂತೆ ಜಾಗೃತಿ ವಹಿಸಬೇಕೆಂದು ಹೇಳಿದರು.

ಶಾಸಕ ಎಸ್.ಎ.ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್.ಶಿವಯೋಗಿಸ್ವಾಮಿ, ಡಿ.ಹೆಚ್.ಒ ಡಾ. ನಾಗರಾಜ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ರಾಘವನ್, ಬಡಾವಣೆ ಪೊಲೀಸ್ ಠಾಣೆ ಎ.ಎಸ್.ಐ ಜಯಣ್ಣ ಹಾಗೂ ಇತರರು ಬೂಸ್ಟರ್ ಡೋಸ್ ಲಸಿಕೆ ಹಾಕಿಸಿಕೊಂಡರು. ಈ ಸಂದರ್ಭದಲ್ಲಿ ಆರ್.ಸಿ.ಹೆಚ್ ಅಧಿಕಾರಿ ಮೀನಾಕ್ಷಿ, ಪಾಲಿಕೆ ಮೇಯರ್ ಎಸ್.ಟಿ ವೀರೇಶ್, ಟಿ.ಹೆಚ್.ಒ ಡಾ. ವೆಂಕಟೇಶ್ ಇತರು ಉಪಸ್ಥಿತರಿದ್ದರು.

error: Content is protected !!