ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ

ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ - Janathavaniಪಿ.ಬಿ. ರಸ್ತೆಯಲ್ಲಿನ ಪ್ರತ್ಯೇಕ ಸ್ಥಳವೊಂದರಲ್ಲೇ ಅಪಘಾತದಿಂದ ಇಬ್ಬರು ಮೃತಪಟ್ಟರು. ಘಟನೆಯನ್ನು ಅವಲೋಕಿಸಿದಾಗ ಸುರಕ್ಷತೆಗಾಗಿ ಸಮರ್ಪಕ ಹೆಲ್ಮೆಟ್ ಇಲ್ಲದಿರುವುದೇ ಕಾರಣ. ಎಷ್ಟೇ  ಜಾಗೃತಿ, ಮನವಿ ಮಾಡಿದರೂ ಕೆಲ ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸಲು ಮನಸ್ಸು ಮಾಡದೇ ಕಾಟಾಚಾರ ಮತ್ತು ನಿರ್ಲಕ್ಷ ತೋರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೇ, ಅರ್ಧ ಹೆಲ್ಮೆಟ್ ಮಾರಾಟ ಮಾಡುವುದರ ಮೇಲೆ ಕಠಿಣ ಕ್ರಮಕೈಗೊಳ್ಳಲಾಗಿದೆ. ಸುರಕ್ಷಿತವಲ್ಲದ ಹೆಲ್ಮೆಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

-ಸಿ.ಬಿ. ರಿಷ್ಯಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ದಾವಣಗೆರೆ, ಜ.10- ನಗರದಲ್ಲಿ ಬೈಕ್ ಕಳ್ಳತನಗಳು ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಕಳ್ಳರ ಮೇಲೆ ಕಣ್ಗಾವಲಾಗಿ ರಾತ್ರಿಯ ಗಸ್ತು ಮತ್ತು ರಾತ್ರಿಯ ಚೆಕ್ ಪೋಸ್ಟ್ ಗಳನ್ನು ಪ್ರಾರಂಭಿಸಲಾಗಿದ್ದು, ನಗರಕ್ಕೆ ಪ್ರವೇಶಿಸುವ ಎಲ್ಲಾ ಮುಖ್ಯ ಕೇಂದ್ರಗಳಲ್ಲಿ ಚೆಕ್ಕಿಂಗ್ ಶುರು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ಅವರು, ಇಂದು ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಸ್ವತ್ತು ಕಳವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ಸ್ವತ್ತನ್ನು ವಾರಸುದಾರರಿಗೆ ಒಪ್ಪಿಸುವ ಪರೇಡ್ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಮಾರ್ಟ್ ಸಿಟಿ ವತಿಯಿಂದ ನಗರದಲ್ಲಿ 36 ಚೆಕ್ ಪಾಯಿಂಟ್‍ಗಳಲ್ಲಿ ಕಾರ್ಯನಿರ್ವ ಹಿಸದೇ ಇದ್ದಂತಹ ಸಿಸಿ ಟಿವಿ ಕ್ಯಾಮೆರಾಗಳು ಇನ್ನು ಮುಂದೆ ಕಾರ್ಯ ನಿರ್ವಹಿಸಲಿದ್ದು, ನಗರದಲ್ಲಿ ಒಟ್ಟು 215 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳ ಪತ್ತೆ ಸುಲಭವಾಗಲಿದೆ ಎಂದು ಹೇಳಿದರು.

ಜನವರಿ ತಿಂಗಳು ಪೂರ್ತಿ ಅಪರಾಧ ತಡೆ ಮಾಸಾಚರಣೆ ನಡೆಯುತ್ತಿದ್ದು, ಪಿಎಸ್‍ಐಗಳು ಪ್ರಮುಖ ವೃತ್ತಗಳಲ್ಲಿ ಹೆಲ್ಮೆಟ್ ಧರಿಸದೇ ಸಂಚರಿ ಸುವವರ ವಿರುದ್ಧ ದಂಡ ವಿಧಿಸುವುದರ ಜೊತೆಗೆ ಜಾಗೃತಿ ಮೂಡಿಸುತ್ತಿದ್ದಾರೆ. ದಂಡ ವಿಧಿಸುವುದು ಮುಖ್ಯ ಉದ್ದೇಶವಲ್ಲ. ಶಾಲಾ – ಕಾಲೇಜುಗಳಲ್ಲಿಯೂ ಜಾಗೃತಿ ಮೂಡಿಸಲಾಗುವುದು ಎಂದರು.

ಹಳೇ ದಾವಣಗೆರೆಯಲ್ಲಿ ಪಾರ್ಕಿಂಗ್ ಸಮಸ್ಯೆ ಹೆಚ್ಚಾಗಿದ್ದು, ತಳ್ಳುವ ಗಾಡಿ ವ್ಯಾಪಾರಿಗಳು ರಸ್ತೆ ಮಧ್ಯದಲ್ಲಿಯೇ ವ್ಯಾಪಾರ ಮಾಡುತ್ತಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಏಕಮುಖ ಸಂಚಾರದ ಫಲಕ ಇದ್ದರೂ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದು, ಅದನ್ನು ತಡೆಯಲು ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಎಎಸ್ಪಿ ಕನಿಕಾ ಸಿಕ್ರಿವಾಲ್, ಡಿವೈಎಸ್‍ಪಿಗಳಾದ ನರಸಿಂಹ ತಾಮ್ರಧ್ವಜ, ಡಿ.ಎಸ್. ಬಸವರಾಜ, ಕೆ.ಎನ್. ಸಂತೋಷ್, ಪ್ರಕಾಶ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.

error: Content is protected !!