ದಾವಣಗೆರೆ, ಜ. 10 – ಅಧರಕ್ಕೆ ಸಿಹಿ, ಉದರಕ್ಕೆ ಕಹಿ ಎಂಬ ಮಾತಿದೆ. ಅಂದರೆ ರುಚಿಗೆ ಸಿಹಿಯಾಗಿದ್ದರೂ ಹೊಟ್ಟೆಗೆ ಅಪಾಯಕಾರಿ ಎಂಬುದು ಈ ಹಳೆಯ ಮಾತಿನ ಅರ್ಥ. ಆದರೆ, ರುಚಿಯೊಂದಿಗೆ ಆರೋಗ್ಯವೂ ಇದ್ದರೆ ಚಂದ ಎಂಬುದು ಜಿಎಂಐಟಿಯ ಬಯೋಟೆಕ್ ವಿದ್ಯಾರ್ಥಿಗಳ ನಿಲುವಾಗಿದೆ.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಉತ್ಪನ್ನ ಮೇಳದಲ್ಲಿ ವಿದ್ಯಾರ್ಥಿಗಳು ಅಡಿಕೆ ಯಿಂದ ತಯಾರಿಸಲಾದ ಉಪ್ಪಿನಕಾಯಿ, ಊದುಬತ್ತಿ, ದೊಡ್ಡಪತ್ರೆಯ ಕೆಮ್ಮು ನಿವಾರಕ ಚಾಕೊಲೇಟ್, ರಾಗಿಯ ಮಿಲ್ಕ್ ಶೇಕ್ ಸೇರಿದಂತೆ 43 ಉತ್ಪನ್ನಗಳನ್ನು ಪ್ರದರ್ಶಿಸಿದರು. ರುಚಿಯ ಜೊತೆಗೆ ಆರೋಗ್ಯವನ್ನೂ ಕಾಪಾಡುವ ಪ್ರಮುಖ ಉದ್ದೇಶ ಉತ್ಪನ್ನಗಳಲ್ಲಿ ಕಂಡು ಬಂತು.
ಒಂದು ದಿನದ ಪ್ರದರ್ಶನದಲ್ಲಿ ಆರೋಗ್ಯಕ್ಕೆ ಹಿತವಾದ, ಪರಿಸರ ಸ್ನೇಹಿ, ರೋಗ ನಿರೋಧಕ ಹಾಗೂ ಶಕ್ತಿ ವರ್ಧಕ ಎಂಬ ನಾಲ್ಕು ವಿಭಾಗಗಳಲ್ಲಿ ಉತ್ಪನ್ನಗಳನ್ನು ಪ್ರದರ್ಶಿಸಲಾಗಿತ್ತು.
ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಜಿ.ಎಂ. ಲಿಂಗರಾಜು ಅವರು, ವಿದ್ಯಾರ್ಥಿಗಳ ಆವಿಷ್ಕಾರಗಳನ್ನು ಉತ್ಪನ್ನಗಳಾಗಿ ಮಾರುಕಟ್ಟೆಗೆ ತರಬೇಕಿದೆ. ಇದಕ್ಕಾಗಿ ಬೆಂಗಳೂರಿನ ನವೋದ್ಯಮಗಳನ್ನು ಸಂಪರ್ಕಿಸಲಾಗಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವೈ. ವಿಜಯ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವಕ್ಕೆ ಉತ್ತೇಜನ ನೀಡಲಾಗುತ್ತಿದೆ. ಈ ಉತ್ಪನ್ನಗಳಲ್ಲಿ ಕನಿಷ್ಠ ಹತ್ತಾದರೂ ಮಾರುಕಟ್ಟೆಗೆ ಬರುವಂತೆ ಮಾಡಲು ಪ್ರಯತ್ನ ನಡೆಸಲಾಗುವುದು ಎಂದು ತಿಳಿಸಿದರು.
ಮೇಳದಲ್ಲಿ ಏಳನೇ ಸೆಮಿಸ್ಟರ್‌ನ ಎಂ.ಕೆ. ಮಧು ಅವರು ದೊಡ್ಡಪತ್ರೆ ಬಳಸಿ ಕೆಮ್ಮು ನಿವಾರಕ ಚಾಕೊಲೇಟ್ ರೂಪಿಸಿದ್ದಾರೆ. ಕೆಮ್ಮು – ಶೀತ ನಿವಾರ ಣೆಯ ಜೊತೆಗೆ ಜೀರ್ಣಶಕ್ತಿ ಸುಧಾರಣೆಗೆ ಇದು ನೆರವಾಗುವ ಜೊತೆಗೆ ಬಾಯಿಗೆ ಪರಿಮಳ ನೀಡುತ್ತದೆ ಎಂದುವರು ಹೇಳಿದ್ದಾರೆ. ಈ ಯೋಜನೆಯಲ್ಲಿ ಕೆ.ವಿ. ಯಶಸ್ವಿನಿ, ಬಿ. ಭೂಮಿಕ, ಪಿಎಂ. ಹೊನ್ನು ಹಾಗೂ ಕೆ.ಎಸ್. ವಿಜಯ್ ಭಾಗಿಯಾಗಿದ್ದಾರೆ.
ಮಂಜುನಾಥ್ ಸೊಣ್ಣದ್, ಎನ್.ಆರ್. ಚಿನ್ಮಯಿ ಹಾಗೂ ಎಂ. ಜೀವಿತ ಅವರ ತಂಡ ಸೊಯಾಬೀನ್ ಮೂಲಕ ಮೊಸರಿನ ಪುಡಿ ರೂಪಿಸಿದೆ.
ಭಾವನಾ ಹಿರೇಮಠ್ ಅವರ ತಂಡ ಗುಲಾಬಿ ದಳ ಬಳಸಿ ನೈಸರ್ಗಿಕ ಲಿಪ್‌ಸ್ಟಿಕ್ ತಯಾರಿಸಿದೆ. ಇದು ತುಟಿ ಒಡೆಯುವ ಸಮಸ್ಯೆಯನ್ನೂ ನಿವಾರಿಸು ತ್ತದೆ ಎಂದು ಲಿಪ್‌ಸ್ಟಿಕ್ ರೂಪಿಸಿದ ತಂಡದಲ್ಲಿರುವ ಗೌತಮಿ ಹಿರೇಮಠ್, ಎಂ. ವಂದನ, ಎಸ್.ಆರ್. ಮುದ್ದೇಗೌಡ, ಡಿ.ಆರ್. ದೀಕ್ಷಿತ್ ಹೇಳಿದ್ದಾರೆ.
ಲಿಪ್‌ಸ್ಟಿಕ್ ನಂತರ ಕೂದಲಿನ ಬಣ್ಣ ಬೇಡವೇ? ಖಂಡಿತ, ಅದನ್ನು ರೂಪಿಸಿರುವುದು ಎಂ. ಗೀತ, ಸಿ.ವಿ. ಗೌರಮ್ಮ ಹಾಗೂ ಸುಜಾತರ ತಂಡ. ಶುಂಠಿ, ಭೃಂಗರಾಜ ಪುಡಿ, ಮೆಹಂದಿ ಇತ್ಯಾದಿ ನೈಸರ್ಗಿಕ ವಸ್ತುಗಳನ್ನು ಬಳಸಿ ರೂಪಿಸಿರುವ ಹೇರ್‌ಡೈ, ಬಣ್ಣವಷ್ಟೇ ಅಲ್ಲದೇ ಕೂದಲನ್ನು ದಪ್ಪ ಹಾಗೂ ಹೊಟ್ಟು ತಡೆಯುವ ಕೆಲಸ ಮಾಡುತ್ತದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಪರಿಸರದಲ್ಲಿ ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ರುಚಿಯ ಜೊತೆಗೆ ಜನರ ಆರೋಗ್ಯಕ್ಕೆ ಹಿತ ನೀಡುವ ಪದಾರ್ಥಗಳನ್ನು ರೂಪಿಸಲು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪರಿ ಶ್ರಮ ಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಈ ಉತ್ಪನ್ನ ಗಳು ಮಾರುಕಟ್ಟೆಗೆ ಬಂದು ಜನರಿಗೆ ತಲುಪಿದರೆ ಅವರ ಶ್ರಮ ಸಾರ್ಥವಾಗುವುದರಲ್ಲಿ ಸಂಶಯವಿಲ್ಲ.
ಸಸ್ಯಾಧಾರಿತ ಮಾಂಸ!
ನೀವು ಸಸ್ಯಹಾರಿಯೇ ಅಥವಾ ಮಾಂಸಾಹಾರಿಯೇ ಎಂಬ ಪ್ರಶ್ನೆಗೆ ಶಾಶ್ವತ ಪೂರ್ಣ ವಿರಾಮ ನೀಡಲು ಜೈವಿಕ ತಂತ್ರಜ್ಞಾನದ ವಿದ್ಯಾರ್ಥಿಗಳು ಮುಂದಾಗಿರುವಂತಿದೆ. ಏಕೆಂದರೆ ವಿದ್ಯಾರ್ಥಿಗಳು ಕಾಳುಗಳನ್ನು ಬಳಸಿ ಕೃತಕ ಮಾಂಸವನ್ನು ರೂಪಿಸಿದ್ದಾರೆ!
ಶುದ್ಧ ಸಸ್ಯಹಾರಿಗಳಾದ ಜಿ. ಚಂದನ, ಬಿ.ಜಿ. ಗಗನಶ್ರೀ ಮುಂತಾದವರು ಸೇರಿಕೊಂಡು ಹಲವಾರು ಕಾಳುಗಳನ್ನು ಬಳಸಿ ಸಸ್ಯಾಧಾರಿತ ಮಾಂಸ ರೂಪಿಸಿದ್ದಾರೆ. ಇದಕ್ಕೆ ಬೀಟ್‌ರೂಟ್‌ನಿಂದ ಪಡೆದ ಬಣ್ಣವನ್ನೂ ಬೆರೆಸಿದ್ದಾರೆ. ಅಂತಿಮವಾಗಿ ಉತ್ಪನ್ನ ಥೇಟ್ ಮಾಂಸದಂತೆಯೇ ಇದೆ.
ಮಾಂಸಾಹಾರಿ ಸ್ನೇಹಿತರು ಈ ಉತ್ಪನ್ನ ಬಳಸಿದ್ದಾರೆ. ಮಾಂಸದ ರುಚಿಗೆ ಅತ್ಯಂತ ಸಮೀಪವಾಗಿದೆ ಎಂಬ ತೀರ್ಪು ನೀಡಿದ್ದಾರೆ ಎಂದು ಚಂದನ ಹೇಳಿದ್ದಾರೆ.
ಈ ಸಸ್ಯಾಧಾರಿತ ಮಾಂಸದಲ್ಲಿ ಕೊಬ್ಬು ಕಡಿಮೆ ಹಾಗೂ ಫೈಬರ್ ಹೆಚ್ಚು ಮತ್ತು ಎಲ್ಲರಿಗೂ ಆರೋಗ್ಯಕರ ಎಂದವರು ತಿಳಿಸಿದ್ದಾರೆ. ಈ ಉತ್ಪನ್ನ ರೂಪಿಸಿದ ತಂಡದಲ್ಲಿ ಜಿ.ಟಿ. ಪೂಜಾ, ಕೆ.ಪಿ. ಪ್ರಣವಿ ಹಾಗೂ ವಿ. ಸಂಜನ ಅವರಿದ್ದಾರೆ.
ಅಡಿಕೆಯ ಉಪ್ಪಿನಕಾಯಿ, ಊದುಬತ್ತಿ
ಪಿ.ವಿ. ಐಶ್ವರ್ಯ ಹಾಗೂ ಸಿ.ಬಿ. ದೀಪ್ತಿ ಅವರು ಅಡಿಕೆ ಉಪ್ಪಿನಕಾಯಿ ಮಾಡಿದ್ದಾರೆ. ಸಾಮಾನ್ಯ ಉಪ್ಪಿನಕಾಯಿ ರೀತಿಯಲ್ಲೇ 2-3 ತಿಂಗಳಲ್ಲಿ ಅಡುಕೆ ಉಪ್ಪಿನಕಾಯಿ ಕಳಿಯುತ್ತದೆ ಎಂದವರು ಹೇಳಿದ್ದಾರೆ.
ಅಡಿಕೆಯ ನಾರಿನ ತ್ಯಾಜ್ಯದಿಂದ ಊದುಬತ್ತಿ ತಯಾರಿಸಿರುವುದು ಐಶ್ವರ್ಯ ಸಾಕ್ರೆ, ಪಿ. ಅಂಜಲಿ, ಕೆ. ಭೂಮಿಕ ಹಾಗೂ ಸಿ.ಬಿ. ದೀಪ್ತಿ. ಸುವಾಸನೆಗೆ ಕೊರತೆಯಿಲ್ಲ, ಖರ್ಚೂ ಕಡಿಮೆ ಎಂಬುದು ಅವರ ಅನಿಸಿಕೆ.
ರಾಗಿಯ ಚಾಕೊಲೇಟ್ ಚಂದ
ಎಂ.ಗೀತ, ಸಿ.ವಿ. ಗೌರಮ್ಮ ಹಾಗೂ ಸುಜಾತ ಸೇರಿಕೊಂಡು ರಾಗಿಯ ಚಾಕೊಲೇಟ್ ಮಿಲ್ಕ್‌ಷೇಕ್ ಹಾಗೂ ರಾಗಿಯ ಚಾಕೊಲೇಟ್ ರೂಪಿಸಿದ್ದಾರೆ. ಹಾಲು ಹಾಗೂ ರಾಗಿ ಬೆರೆಸಿ ರೂಪಿಸಿರುವ ರಾಗಿಯ ಚಾಕೊಲೇಟ್ ಮಿಲ್ಕ್‌ಷೇಕ್ ಆರೋಗ್ಯಕ್ಕೆ ಸೂಪರ್‌ಹಿಟ್ ಎಂಬುದು ಅವರ ಅನಿಸಿಕೆ. ಸಕ್ಕರೆಯ ಬದಲು ಜೇನು ತುಪ್ಪ ಬೆರೆಸಿ ರೂಪಿಸಿರುವ ರಾಗಿಯ ಚಾಕೊಲೇಟ್ ಮಕ್ಕಳಿಗೆ ಒಳ್ಳೆಯದು ಎಂದವರು ಹೇಳಿದ್ದಾರೆ.