ಮಲೇಬೆನ್ನೂರು, ಜ.10- ಯಲ್ಲಾಪುರದಲ್ಲಿ ಕೆತ್ತನೆಗೊಂಡಿರುವ ವಾಲ್ಮೀಕಿ ಗುರುಪೀಠದ ನೂತನ ರಥದ ಬಿಡಿ ಭಾಗಗಳನ್ನು ಹೊತ್ತ 2 ಬೃಹತ್ ಲಾರಿಗಳು ಸೋಮವಾರ ಬೆಳಿಗ್ಗೆ ಹಂಪಿಯಿಂದ ಹೊರಟು ಹೊಸಪೇಟೆ, ಮರಿಯಮ್ಮನಹಳ್ಳಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಹರಿಹರ, ಕುಮಾರಪಟ್ಟಣಂ ಮಾರ್ಗವಾಗಿ ಸಂಜೆ ರಾಜನಹಳ್ಳಿ ಮಠ ತಲುಪಿದವು.
ರಾಜನಹಳ್ಳಿ ಪುರ ಪ್ರವೇಶ ಮಾಡಿದ 2 ಲಾರಿಗಳಿಗೆ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ, ಪುಣ್ಯಕೋಟಿ ಮಠದ ಸ್ವಾಮೀಜಿ ಹಾಗೂ ನೂರಾರು ಭಕ್ತರು ಹೂ ಮಾಲೆ ಹಾಕಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. 1.70 ಕೋಟಿ ರೂ ವೆಚ್ಚದಲ್ಲಿ ಸಿದ್ದಗೊಂಡಿರುವ ನೂತನ ರಥಕ್ಕೆ ಸಚಿವ ಆನಂದ್‌ಸಿಂಗ್ ಅವರು 1.40 ಕೋಟಿ ರೂ, ಸಂಸದ ಅರಸೀಕೆರೆ ದೇವೇಂದ್ರಪ್ಪ ಅವರು 10 ಲಕ್ಷ ರೂ, ಶಾಸಕ ಜಿ.ಟಿ. ದೇವೇಗೌಡ ಅವರು 10 ಲಕ್ಷ ರೂ ಮತ್ತು ಉಳಿದ 10 ಲಕ್ಷ ರೂ.ಗಳನ್ನು 10 ಜನ ಭಕ್ತರು ತಲಾ 1 ಲಕ್ಷ ರೂ. ಗಳಂತೆ ದೇಣಿಗೆ ನೀಡಿದ್ದಾರೆಂದು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ತಿಳಿಸಿದರು.
ಬುಧವಾರದಿಂದ ಮಠದ ಆವರಣದಲ್ಲಿ ರಥಕ್ಕೆ ಬಿಡಿಭಾಗಗಳ ಜೋಡಣೆ ಕೆಲಸ ಆರಂಭವಾಗಲಿದ್ದು, ಫೆ. 5 ಕ್ಕೆ 65 ಅಡಿ ಎತ್ತರದ ರಥ ಸಜ್ಜಾಗಿ ನಿಲ್ಲಲಿದೆ ಎಂದು ಮಠದ ಧರ್ಮದರ್ಶಿ ಹೊಸಪೇಟೆಯ ಜಂಬಣ್ಣ ನಾಯಕ ಮಾಹಿತಿ ನೀಡಿದರು. ಮಠದ ಆಡಳಿತಾಧಿಕಾರಿ ಟಿ.ಓಬಳಪ್ಪ, ಧರ್ಮದರ್ಶಿ ಗಳಾದ ಬಿ. ವೀರಣ್ಣ, ನಲುವಾಗಲು ನಾಗರಾಜಪ್ಪ, ಕೆ.ಬಿ. ಮಂಜುನಾಥ್, ಗ್ರಾ.ಪಂ. ಅಧ್ಯಕ್ಷೆ ಚೈತ್ರ ಲಂಕೇಶ್ ಸೇರಿದಂತೆ, ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.
ಇದಕ್ಕೂ ಮುನ್ನ ಹರಿಹರ ನಗರದ ಗಾಂಧಿ ವೃತ್ತದಲ್ಲಿ ಜಿ.ಪಂ. ಮಾಜಿ ಸದಸ್ಯ ಎಂ. ನಾಗೇಂದ್ರಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ತಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿ ರಂಗಪ್ಪ, ನಗರಸಭೆ ಸದಸ್ಯ ದಿನೇಶ್‌ಬಾಬು, ಮಾರುತಿ ಬೇಡರ್, ಜಿಲ್ಲಾ ವಾಲ್ಮೀಕಿ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ವಿಜಯ ಶ್ರೀ ಮಹೇಂದ್ರ ಕುಮಾರ್, ಕಾರ್ಯದರ್ಶಿ ಗೌರಮ್ಮ ಮಂಜು ನಾಥ್, ಹರಿಹರದ ಪಾರ್ವತಿ, ಮಲೇಬೆ ನ್ನೂರಿನ ಕೆ.ಜಿ. ರಂಗನಾಥ್, ಪಾಳೇಗಾರ್ ನಾಗರಾಜ್, ಪಾಲಾಕ್ಷಪ್ಪ, ಮಧು, ಮೂರ್ತಿ, ಆಟೋ ಹನುಮಂತ, ಹೆಚ್. ಸುಧಾಕರ್, ಪತ್ರಕರ್ತ ಜಿಗಳಿ ಪ್ರಕಾಶ್, ಮೆಣಸಿನಹಾಳ್ ಬಸವರಾಜ್ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದು, ರಥದ ಬಿಡಿಭಾಗಗಳನ್ನು ಹೊತ್ತು ಬಂದ ಲಾರಿಗಳನ್ನು ಸಂಭ್ರಮದಿಂದ ಸ್ವಾಗತಿಸಿ, ಬೀಳ್ಕೊಟ್ಟರು.