ಮಲೇಬೆನ್ನೂರು ಪುರಸಭೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರ ಒತ್ತಾಯ
ಮಲೇಬೆನ್ನೂರು, ಜ.7- ಇಲ್ಲಿನ ಪುರಸಭೆಯ 2021-22ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ಶುಕ್ರವಾರ ಸರಳವಾಗಿ ಜರುಗಿತು.
ಆರಂಭದಲ್ಲಿ ಪುರಸಭೆ ಅಧಿಕಾರಿ ದಿನಕರ್ ಅವರು ಸಭೆಯ ಉದ್ದೇಶ ತಿಳಿಸಿ, ಬಜೆಟ್ ತಯಾರಿಗೆ ಸಾರ್ವಜನಿಕರು ಸಲಹೆ-ಸಮಸ್ಯೆ ಹಾಗೂ ಕೈಗೊಳ್ಳಬಹುದಾದ ಯೋಜನೆಗಳ ಬಗ್ಗೆ ತಿಳಿಸುವಂತೆ ಕೋರಿದರು.
ಕನ್ನಡ ಸಂಘದ ಸಂಸ್ಥಾಪಕ ಹಾಗೂ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯ, ಪ್ರಗತಿಪರ ಚಿಂತಕ ಜ್ಯೋತಿ ನಾಗಭೂಷಣ್ ಮಾತನಾಡಿ, ಪಟ್ಟಣದಲ್ಲಿ ಬೀದಿ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಕೊಡಿಸಬೇಕು.
ಸರ್ಕಾರಿ ಕಾಲೇಜು ಬಳಿ ಹೈ ಮಾಸ್ಟ್ ದೀಪ ಹಾಗೂ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿ ಭದ್ರಾ ಕಾಲುವೆಗೆ ಸುರಕ್ಷಾ ಬೇಲಿ ಹಾಕಬೇಕು. ವಾರ್ಡ್‌ಗಳಲ್ಲಿ ನೀರು ಬಿಡುವ ಸಮಯ ನಿಗದಿಗೊಳಿಸಿ ನಿಯಂತ್ರಕಗಳನ್ನು ಅಳವಡಿಸಬೇಕು.
ಲಭ್ಯವಿರುವ ಸ್ಥಳಗಳಲ್ಲಿ ಉದ್ಯಾನವನ ನಿರ್ಮಾಣಕ್ಕೆ ಒತ್ತು ನೀಡಬೇಕು. ಪ್ರತಿ ತಿಂಗಳಿಗೊಮ್ಮೆ ಪ್ರಾಣಿ, ಪಶು ನಿಯಂತ್ರಣ ಸಮಿತಿ ಹಾಗೂ ಜೀವವೈವಿಧ್ಯ ನಿರ್ವಹಣಾ ಸಮಿತಿ ಸಭೆ ನಡೆಸಬೇಕೆಂದು ನಾಗಭೂಷಣ್ ಸಲಹೆ ನೀಡಿದರು.
ಪುರಸಭೆ ಸದಸ್ಯ ಸಾಬೀರ್ ಅಲಿ ಮಾತನಾಡಿ, ಪಟ್ಟಣದಲ್ಲಿ ನೀರಿನ ಸಮಸ್ಯೆ ಆಗದಂತೆ ಶಾಶ್ವತ ಯೋಜನೆ ರೂಪಿಸಿ ಎಂದರು. 23ನೇ ವಾರ್ಡಿನಲ್ಲಿ ರಸ್ತೆ, ಚರಂಡಿ ನಿರ್ಮಿಸುವಂತೆ ಶಿಕ್ಷಕ ಪಿ. ಹಾಲೇಶ್ ಆಗ್ರಹಿಸಿದರು.
1ನೇ ವಾರ್ಡಿನ ಲೋಹಿತ್ ಅವರು ರಾಜಕಾಲುವೆಯ ಚರಂಡಿ ನೀರು ಎಲ್ಲೆಂದರಲ್ಲಿ ಹರಿಯುತ್ತಿದ್ದು, ಕಾಲುವೆಯಲ್ಲಿ ಹರಿಯುವಂತೆ ದುರಸ್ತಿ ಮಾಡಿಸಿ ಎಂದರು.
ಪಟ್ಟಣದ ಹೊರವಲಯದಲ್ಲಿ ಸ್ವಾಗತ-ವಂದನೆ ನಾಮಫಲಕ ಅಳವಡಿಸುವಂತೆ ಪತ್ರಕರ್ತ ರಾದ ನಟರಾಜನ್, ಜಿಗಳಿ ಪ್ರಕಾಶ್ ಹೇಳಿದರು.
ಗುಪ್ತವಾರ್ತೆಯ ಕರಿಬಸಪ್ಪ ಅವರು ಸಿಸಿ ಟಿವಿ ಕ್ಯಾಮೆರಾ ದುರಸ್ತಿಗೆ ಅನುದಾನ ಮೀಸಲಿಡಿ ಎಂದು ಮನವಿ ಮಾಡಿದರು. 22ನೇ ವಾರ್ಡಿನ ಪಿ.ಎಸ್. ಬಸವರಾಜ್ ಅವರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಎಂದರು.
ಸಭೆಯ ನೇತೃತ್ವ ವಹಿಸಿದ್ದ ಪ್ರಭಾರ ಮುಖ್ಯಾ ಧಿಕಾರಿ ಗಣೇಶ್‌ರಾವ್ ಮಾತನಾಡಿ, ಎಲ್ಲರ ಸಲಹೆಗಳನ್ನು ಸ್ವೀಕರಿಸಿದ್ದು, ಇನ್ನೊಮ್ಮೆ ಸಭೆ ನಡೆಸಿ ನಂತರ ಪೂರಕ ಬಜೆಟ್ ಮಂಡಿಸಲಾಗುವುದೆಂದರು.
ಪುರಸಭೆ ಕಂದಾಯಾಧಿಕಾರಿ ಪ್ರಭು, ಇಂಜಿನಿಯರ್ ಹಾಲೇಶಪ್ಪ, ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯಾಧಿಕಾರಿ ನವೀನ್, ಇಮ್ರಾನ್, ಜಗದೀಶ್ ಮತ್ತಿತರರು ಸಭೆಯಲ್ಲಿದ್ದರು.