ಸಂಸದರ ಪ್ರದೇಶಾಭಿವೃದ್ಧಿ ಕಾಮಗಾರಿ ತ್ವರಿತ ಪೂರ್ಣಗೊಳಿಸಲು ಸಂಸದ ಜಿ.ಎಂ. ಸಿದ್ದೇಶ್ವರ ತಾಕೀತು
ಹೆಸರು ದೊಡ್ಡದಿರಲಿ
ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಮಾಡಲಾದ ಕೆಲಸಗಳಲ್ಲಿ ಅವರ ಹೆಸರು ದೊಡ್ಡದಾಗಿದ್ದರೆ, ಸಂಸದರ ಕ್ಷೇತ್ರಾಭಿವೃದ್ಧಿ ಅನುದಾನದ ಕಾಮಗಾರಿ ಗಳಲ್ಲಿ ತಮ್ಮ ಹೆಸರು ಚಿಕ್ಕದಾಗಿರುತ್ತದೆ. ನಾನೇನು ನಿಮ್ಮ ವೈರಿಯೇ? ಎಂದು ಸಂಸದ ಸಿದ್ದೇಶ್ವರ ಅಧಿಕಾರಿಗಳನ್ನು ಪ್ರಶ್ನಿಸಿದ್ದಾರೆ. ಶಾಸಕರ ರೀತಿ ಯಲ್ಲೇ ತಮ್ಮ ಹೆಸರನ್ನು ದೊಡ್ಡದಾಗಿ ಫಲಕಗಳಲ್ಲಿ ಹಾಕುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾನೈಟ್ ಹಾಕಿದರೆ ಹೈಟೆಕ್
ಹರಿಹರ ತಾಲ್ಲೂಕಿನ ಅಮರಾವತಿ ಗ್ರಾಮದ ಬಳಿ ಹೈಟೆಕ್ ಬಸ್ ತಂಗುದಾಣ ಕಟ್ಟಡ ನಿರ್ಮಿಸಲಾಗುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡುವಾಗ ಸಂಸದ ಜಿ.ಎಂ. ಸಿದ್ದೇಶ್ವರ ಅವರು §ಹೈಟೆಕ್ ತಂಗುದಾಣ’ ಎಂದರೆ ಏನು? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು ತಂಗುದಾಣಗಳಿಗೆ ಗ್ರಾನೈಟ್ ಇತ್ಯಾದಿ ಹಾಕುತ್ತೇವೆ. ಈ ರೀತಿಯ ತಂಗುದಾಣಗಳಿಗೆ ಹೈಟೆಕ್ ಎಂದು ಕರೆಯಲಾಗುತ್ತದೆ ಎಂದರು.
ದಾವಣಗೆರೆ, ಜ. 7 – ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಕೈಗೊಳ್ಳುವ ಕಾಮಗಾರಿಗಳು ವಿಳಂಬವಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿರುವ ಸಂಸದ ಜಿ.ಎಂ. ಸಿದ್ದೇಶ್ವರ, ಜನಪ್ರತಿನಿಧಿಗಳ ಗೌರವ ಉಳಿಸುವ ಬದಲು ಗೌರವ ಕಳೆಯುವ ಪ್ರಶ್ನೆ ಉದ್ಭವಿಸುತ್ತಿದೆ ಎಂದಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆಯಲಾಗಿದ್ದ 17ನೇ ಲೋಕಸಭಾ ಅವಧಿಯ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ಹಾಗೂ ಆದರ್ಶ ಗ್ರಾಮಗಳ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕ್ಷೇತ್ರಾಭಿವೃದ್ಧಿ ನಿಧಿಯ ಕಾಮಗಾರಿಗಳಿಗೆ ತ್ವರಿತ ಆಡಳಿತಾತ್ಮಕ ಅನುಮೋದನೆ ದೊರೆತು, ಮೂರು ತಿಂಗಳಲ್ಲೇ ಕಾಮಗಾರಿ ಪೂರ್ಣವಾಗಬೇಕು. ಆದರೆ, ಕೆಲವು ಕಾಮಗಾರಿಗಳು 9 ತಿಂಗಳಾದರೂ ಪೂರ್ಣವಾ ಗಿಲ್ಲ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
2020ರಲ್ಲೇ ಕಾಮಗಾರಿಗಳಿಗೆ ಅನುದಾನ ನೀಡಿದ್ದರೂ ವಿಳಂಬವಾಗುತ್ತಿದೆ. ಚುನಾವಣೆಯೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಜನರಿಗೆ ವಾಗ್ದಾನ ಮಾಡಿಯೂ ಕಾಮಗಾರಿ ಮಾಡಿಸಲಿಲ್ಲ ಎಂಬ ಆರೋಪ ತಮ್ಮ ಮೇಲೆ ಬರುತ್ತದೆ. ಮುಂದಿನ ಚುನಾವಣೆಗೆ ನಾನು ನಿಲ್ಲುತ್ತೇನೆಯೋ, ಇಲ್ಲವೋ ಗೊತ್ತಿಲ್ಲ, ನಿಂತರೂ ಗೆಲ್ಲುತ್ತೇನೋ ಇಲ್ಲವೋ ಗೊತ್ತಿಲ್ಲ. ಹೀಗಿರುವಾಗ ತ್ವರಿತವಾಗಿ ಕಾಮಗಾರಿ ಮಾಡಿ ಎಂದವರು ತಾಕೀತು ಮಾಡಿದರು.
ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಬಳಕೆಯಾಗದೇ ಹೋದರೆ, ಅದನ್ನು ವಾಪಸ್ ಪಡೆದು ಬೇರೆಯವರಿಗೆ ನೀಡಲಾಗುತ್ತದೆ. ಈ ರೀತಿ ಆಗಿ ತಮಗೆ 45 ಲಕ್ಷ ರೂ. ಅನುದಾನ ದೊರೆತಿದೆ. ಬಳಕೆ ಮಾಡಿಕೊಳ್ಳದಿದ್ದರೆ ತಮ್ಮ ಅನುದಾನ ಬೇರೆಯವರಿಗೆ ಹೋಗುತ್ತದೆ ಎಂದವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಬಸ್ ತಂಗುದಾಣಗಳನ್ನು ತಿಂಗಳಲ್ಲೇ ನಿರ್ಮಿಸಬಹುದು. ಇಂತಹ ಕಾಮಗಾರಿಗಳು ವಿಳಂಬವಾಗುತ್ತಿವೆ. ಕಾಮಗಾರಿಗಳು ಪೂರ್ಣಗೊಂಡಿದ್ದರೆ ತಹಶೀಲ್ದಾರರು ತ್ವರಿತವಾಗಿ ಆ ಬಗ್ಗೆ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.
ಆದರ್ಶ ಗ್ರಾಮಗಳು ಮಾದರಿಯಾಗಲಿ : ಸಂಸದರ ಆದರ್ಶ ಗ್ರಾಮಗಳಿಗೆ ಆಯ್ಕೆಯಾಗಿರುವ ಜಗಳೂರು ತಾಲ್ಲೂಕಿನ ಮುಷ್ಟೂರು, ಚನ್ನಗಿರಿಯ ಮಲ್ಲಾಪುರ ಹಾಗೂ ಹೊನ್ನಾಳಿಯ ಸೊರಟೂರುಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸೌಲಭ್ಯಗಳನ್ನು ತಲುಪಿಸುವಂತೆ ಸಂಸದ ಸಿದ್ದೇಶ್ವರ ಸೂಚಿಸಿದ್ದಾರೆ.
ಸಂಸದರ ಆದರ್ಶ ಗ್ರಾಮದ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿ ಸಿಇಒಗಳು ನಿಯಮಗಳ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಸಂಸದರ ಆದರ್ಶ ಗ್ರಾಮಗಳು ಮಾದರಿ ಗ್ರಾಮಗಳಾಗಬೇಕು ಎಂದವರು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ನಮ್ಮದೇ ಸರ್ಕಾರ ಇದೆ. ಈ ಗ್ರಾಮಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಬೇಕು. ಮುದ್ರಾ, ಮಣ್ಣಿನ ಆರೋಗ್ಯ, ಫಸಲು ವಿಮೆ, ಉಜ್ವಲ, ಆಯುಷ್ಮಾನ್ ಭಾರತ್, ಜನ್ ಧನ್, ಜಲ ಜೀವನ್ ಮಿಷನ್, ವಸತಿ ಸೇರಿದಂತೆ ಎಲ್ಲ ಯೋಜನೆಗಳನ್ನು ಜಾರಿಗೆ ತರಬೇಕು ಎಂದವರು ತಾಕೀತು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ್, ಆದರ್ಶ ಗ್ರಾಮಗಳಲ್ಲಿ 38 ಕೋಟಿ ರೂ.ಗಳ 194 ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಈ ಪೈಕಿ 35 ಕೋಟಿ ರೂ. ಮೊತ್ತದ 167 ಕಾಮಗಾರಿಗಳು ಜಾರಿಯಾಗಿವೆ. 22 ಕಾಮಗಾರಿಗಳು ಪ್ರಗತಿಯಲ್ಲಿದ್ದರೆ, ಐದು ಆರಂಭವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ದೂಡಾ ಅಧ್ಯಕ್ಷ ದೇವರಮನಿ ಶಿವಕುಮಾರ್, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ನಿರ್ದೇಶಕ ರವಿ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ವಿಜಯ್ ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.