12 ಅಡಿಯ ಅಂಬೇಡ್ಕರ್ ಪುತ್ಥಳಿ

ವೃತ್ತವೂ ನವೀಕರಣ: ಸಂಸದ-ಶಾಸಕರಿಂದ ಭೂಮಿ ಪೂಜೆ

ಬಿಜೆಪಿ ಅಂಬೇಡ್ಕರ್ ವಿರೋಧಿ ಎಂದು ಬಿಂಬಿಸುವುದು ಸಲ್ಲ

ನಾನು ಅಂಬೇಡ್ಕರ್ ಶಿಷ್ಯ. ನಾನು ಅವರ ಪುಸ್ತಕ ಓದಿ ಬೆಳೆದವನು. ನಾನಾಗಲೀ ಅಥವಾ ಬಿಜೆಪಿ ನಾಯಕರಾಗಲೀ ಅಂಬೇಡ್ಕರ್ ವಿರೋಧಿಗಳು ಅಲ್ಲ. ಅಧಿಕಾರ ಬಂದಾಗಿನಿಂದಲೂ ನಾವು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಗೌರವಿಸುತ್ತಲೇ ಬಂದಿದ್ದೇವೆ. ದೇಶದಲ್ಲಿ ಅಂಬೇಡ್ಕರ್ ಅವರಿಗೆ ಅತೀ ಹೆಚ್ಚು ಗೌರವ ಸೂಚಿಸಿದ್ದು ಬಿಜೆಪಿ.ನರೇಂದ್ರ ಮೋದಿಯವರು ಅಂಬೇಡ್ಕರ್ ಮ್ಯೂಸಿಯಂ ನಿರ್ಮಾಣ ಮಾಡಿದ್ದಾರೆ. ಅವರ ಜನ್ಮಸ್ಥಳ ಅಭಿವೃದ್ದಿ ಮಾಡಿದ್ದಾರೆ. ದಾವಣಗೆರೆಯಲ್ಲಿ ಕಂಚಿನ ಪ್ರತಿಮೆ ನಿರ್ಮಾಣ ಮಾಡುತ್ತಿದ್ದೇವೆ. ಬಿಜೆಪಿಯವರು ಅಂಬೇಡ್ಕರ್ ವಿರೋಧಿಗಳು ಎಂದು ಕೆಲವರು ಬಿಂಬಿಸುತ್ತಾರೆ. 

– ಸಂಸದ ಜಿ.ಎಂ. ಸಿದ್ದೇಶ್ವರ.

ದಾವಣಗೆರೆ, ಜ.7- ನಗರದ ಅಂಬೇಡ್ಕರ್ ವೃತ್ತದಲ್ಲಿ 12 ಅಡಿ ಎತ್ತರದ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಪುತ್ಥಳಿ ನಿರ್ಮಿಸಿದ ಮೇಲೆ ಅದಕ್ಕೆ ಯಾವುದೇ ರೀತಿಯ ಅವಮಾನ ಆಗದಂತೆ ಜವಾಬ್ದಾರಿ ವಹಿಸುವಂತೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚಿಸ ಲಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದರು.

ಅವರು, ಇಂದು ಅಂಬೇಡ್ಕರ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ನೂತನ ಪುತ್ಥಳಿ ನಿರ್ಮಾಣಕ್ಕೆ ಶಾಸಕ ಎಸ್.ಎ. ರವೀಂದ್ರನಾಥ ಹಾಗೂ ಇನ್ನಿತರರ ಜೊತೆಗೂಡಿ ಭೂಮಿ ಪೂಜೆ ನೆರವೇರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂಬೇಡ್ಕರ್ ಅವರ ಪ್ರತಿಮೆ ನಿರ್ಮಾಣದ ಜೊತೆಗೆ ಅಂಬೇಡ್ಕರ್ ವೃತ್ತವನ್ನೂ ನವೀಕರಣ ಮಾಡಲಾಗುವುದು. ವೃತ್ತದ ಸುತ್ತಲು ಸ್ಟೀಲ್ ರೈಲಿಂಗ್ ನಿರ್ಮಿಸುವ ಕಾಮಗಾರಿ ನಡೆಸಲಾಗುವುದು. ಎಲ್ಲಾ ಕಡೆಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ದೊಡ್ಡಾಗಿದೆ. ಆದರೆ, ನಗರದಲ್ಲಿ ಇರಲಿಲ್ಲ. ಈಗ ಶಾಸಕರೆಲ್ಲರೂ ಸೇರಿಕೊಂಡು ದೊಡ್ಡ ಪ್ರತಿಮೆ ನಿರ್ಮಾಣ ಮಾಡಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ನಗರ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಅವರ ಪ್ರತಿಮೆ ಸ್ಥಾಪನೆ ಮಾಡಬೇಕು ಎಂದು ಮಹಾಪೌರನಾಗಿ ಆಯ್ಕೆಗೊಂಡಾಗಿನಿಂದ ನಿರ್ಧಾರ ಮಾಡಿದ್ದೆ. ಅಲ್ಲದೇ ನಾವುಗಳು ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಹೋರಾಟಗಳನ್ನು ಮಾಡಿದ್ದೆವು. ಅದರ ಪ್ರತಿಫಲವಾಗಿ ಇಂದು ಭೂಮಿ ಪೂಜೆ ಮುಖೇನ ಕನಸು ಕೈಗೂಡಿದಂತಾಗಿದೆ. ಅಂಬೇಡ್ಕರ್ ನೂತನ ಪುತ್ಥಳಿ ಸ್ಥಾಪನೆ ಅಲ್ಲದೇ, ಇಡೀ ವೃತ್ತವನ್ನು ನವೀಕರಣಗೊಳಿಸಲು ಸುಮಾರು 24 ಲಕ್ಷ ರೂ.ಗಳ ಯೋಜನೆ ರೂಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮಾಜಿ ಮೇಯರ್ ಅಜಯ್‍ಕುಮಾರ್, ಪಾಲಿಕೆ ಸದಸ್ಯರಾದ ಕೆ. ಪ್ರಸನ್ನ ಕುಮಾರ್, ಕೆ.ಎಂ. ವೀರೇಶ್, ಎಂ. ಹಾಲೇಶ್, ಪಾಲಿಕೆ ವಿರೋಧ ಪಕ್ಷ ನಾಯಕ ಎ. ನಾಗರಾಜ್, ಅಬ್ದುಲ್ ಲತೀಫ್, ದಲಿತ ಸಂಘಟನೆಗಳ ಮತ್ತು ಸಮಾಜದ ಮುಖಂಡರಾದ ಎಲ್.ಎಂ. ಹನುಮಂತಪ್ಪ, ಆಲೂರು ನಿಂಗರಾಜ್, ಕುಂದುವಾಡ ಮಂಜುನಾಥ್, ಹೆಚ್. ಮಲ್ಲೇಶ್, ಸೋಮ್ಲಾಪುರ ಹನುಮಂತಪ್ಪ ಸೇರಿದಂತೆ ಇತರರು ಇದ್ದರು.

error: Content is protected !!