ಮಕ್ಕಳ ಬಾಲ್ಯದ ಹಕ್ಕು ಕಸಿಯಲಾಗದು

ಬಾಲ ಕಾರ್ಮಿಕ ಪದ್ಧತಿ ನಿಷೇಧ ಜಾಗೃತಿ ಜಾಥಾಗೆ ನ್ಯಾಯಮೂರ್ತಿ ಪ್ರವೀಣ್ ನಾಯಕ್ ಚಾಲನೆ

ದಾವಣಗೆರೆ, ಜ. 7 – ಸಂವಿಧಾನದ ಆಶಯದಂತೆ ಪ್ರತಿಯೊಂದು ಮಗುವಿಗೂ ಬಾಲ್ಯ ಅನುಭವಿಸುವ ಹಕ್ಕಿದೆ. ಅದನ್ನು ಯಾರಿಂದಲೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಹೇಳಿದ್ದಾರೆ.

ನಗರದ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ ಆವರಣದಲ್ಲಿ ಇಂದು ಆಯೋಜಿಸಿದ್ದ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ ಕುರಿತ  ಸಂಚಾರಿ ರಥದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಮಕ್ಕಳ ಬಾಲ್ಯ ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಕಾನೂನುಗಳನ್ನು ಜಾರಿ ಮಾಡಿದೆ.  14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಉಚಿತ ಶಿಕ್ಷಣ, ಸೂಕ್ತ ಆಹಾರ ನೀಡುವಲ್ಲಿ ನಿರಂತರ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ನಿರ್ಮೂಲನಾ ಸಂಚಾರ ಜಾಗೃತಿ ಜಾಥಾ ಕಾರ್ಯಕ್ರಮ ಅತ್ಯಂತ ಮಹತ್ವದ್ದಾಗಿದೆ. ಜಾಗೃತಿ ಜಾಥಾ ಜಿಲ್ಲೆಯಾದ್ಯಂತ ಜ. 14 ರವರೆಗೆ ಸಂಚರಿ ಸಲಿದೆ ಎಂದು ನ್ಯಾಯಮೂರ್ತಿ ಹೇಳಿದರು. 

ಕಲಬುರಗಿ ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ್ ಮಾತನಾಡಿ, ಮಕ್ಕಳನ್ನು ಕೂಲಿಯಾಳುಗಳಾಗಿ ಹಣಕ್ಕಾಗಿ ದುಡಿಸುವುದು ಅತ್ಯಂತ ಕೆಟ್ಟ ಪದ್ಧತಿ. ಇದನ್ನು ಕೊನೆಗಾಣಿಸಲು ಆರೋಗ್ಯವಾದ ವಾತಾವರಣ ನಿರ್ಮಿಸುವ ಅಗತ್ಯವಿದೆ ಎಂದರು.

ಇತ್ತೀಚಿನ ಸಮೀಕ್ಷೆಯ ಪ್ರಕಾರ ದಾವಣಗೆರೆ ಒಂದರಲ್ಲೇ 54 ಬಾಲಕಾರ್ಮಿಕ ಮಕ್ಕಳನ್ನು ಗುರುತಿಸಲಾಗಿದ್ದು, ಕಳೆದ ವರ್ಷ 6 ಮತ್ತು ಈ ವರ್ಷ 1 ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸ್ಪೂರ್ತಿ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ರೂಪ್ಲಾನಾಯ್ಕ್ ಮಾತನಾಡಿ, ಕೊರೊನಾ  ಬಂದ ನಂತರ ಹಲವು ಮಕ್ಕಳು ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವುದು, ಹೋಟೆಲ್, ಗ್ಯಾರೇಜ್ ಹಾಗೂ ಇತರೆಡೆ ಬಾಲಕಾರ್ಮಿಕರಾಗಿ ದುಡಿಯುವುದು ಹೆಚ್ಚಾಗಿದೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗು ತ್ತಿರುವುದು ವಿಷಾದನೀಯ ಎಂದರು.

ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಆರ್. ತಿಪ್ಪೇ ಶಪ್ಪ, ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ಎಸ್.ಆರ್ ವೀಣಾ, ಕಾರ್ಮಿಕ ಅಧಿಕಾರಿ ಜಿ. ಇಬ್ರಾಹಿಂ ಸಾಬ್, ಪೀಪಲ್ ಸ್ವಯಂ ಸೇವಾ ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು. ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ (ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ ಕುರಿತ ಭಿತ್ತಿ ಪತ್ರವನ್ನು ಗಣ್ಯರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

error: Content is protected !!