ಪುನೀತ್ ಸಮಾಜ ಸೇವೆಯ ಸೈನಿಕ: ಮಾಜಿ ಯೋಧರ ಅಭಿಮತ
ದಾವಣಗೆರೆ, ಜ.7- ನಿಟುವಳ್ಳಿಯ ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿನ ಬನ್ನಿ ಮಹಾಂಕಾಳಿ ದೇವಸ್ಥಾನದ ಹತ್ತಿರ ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗವು ಸ್ಥಾಪಿಸಿರುವ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಇಂದು ಅನಾವರಣಗೊಂಡಿತು.
ಮಾಜಿ ಯೋಧರಾದ ಎನ್. ರಾಘವೇಂದ್ರ, ಕೆ.ಪಿ. ಚಂದ್ರಪ್ಪ ಹಾಗೂ ಚೆನ್ನಬಸವನ ಗೌಡ ಗೌಡರ್ ಮತ್ತು ಬಾಡಾ ಕ್ರಾಸ್ ನಲ್ಲಿರುವ ವೀರೇಶ್ವರ ಪುಣ್ಯಾಶ್ರಮದ ವಿಶೇಷ ಚೇತನ ಮಕ್ಕಳಿಂದ ಪುನೀತ್ ಪುತ್ಥಳಿ ಅನಾವರಣಗೊಂಡಿತು. ಪುನೀತ್ ಅಭಿಮಾನಿಗಳು, ಬನ್ನಿ ಮಹಾಂಕಾಳಿ ದೇವಸ್ಥಾನ ಸಮಿತಿಯವರು ಸಹಕಾರ ನೀಡಿದರು.
ಮಾಜಿ ಯೋಧ ಎನ್. ರಾಘವೇಂದ್ರ ಮಾತನಾಡಿ, ಯೋಧರು ಗಡಿಗಳಲ್ಲಿ ದೇಶದ ರಕ್ಷಣೆಗೆ ಸೇವೆ ಮಾಡಿದಂತೆ ಪುನೀತ್ ರಾಜ್ ಕುಮಾರ್ ಅವರು ಸಮಾಜಮುಖಿ ಸೇವೆ ಮಾಡುವ ಮುಖೇನ ಸಮಾಜ ಸೇವೆಯ ಸೈನಿಕರಾಗಿದ್ದರು. ನಮ್ಮಿಂದ ಅವರ ಪುತ್ಥಳಿ ಅನಾವರಣಗೊಳಿಸುತ್ತಿರುವುದು ನಮ್ಮ ಪುಣ್ಯ. ಇಂತಹ ಸಮಾಜ ಮುಖಿ ಯೋಧರಾಗಲು ಯುವ ಪೀಳಿಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಮತ್ತೋರ್ವ ಮಾಜಿ ಯೋಧ ಕೆ.ಪಿ. ಚಂದ್ರಪ್ಪ ಮಾತನಾಡಿ, ಯುವ ಸಮೂಹ ದುಶ್ಚಟಗಳಿಗೆ ದಾಸರಾಗಬಾರದು. ಇದಕ್ಕೆ ಹಣ ವ್ಯಯಿಸಿ ಜೀವನ ಹಾಳು ಮಾಡಿಕೊಳ್ಳುವ ಬದಲಿಗೆ ಪುನೀತ್ ಅವರಂತೆ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಬೇರೆಯವರ ಬಾಳಿಗೆ ಬೆಳಕಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇನ್ನೋರ್ವ ಮಾಜಿ ಯೋಧ ಚೆನ್ನಬಸವನ ಗೌಡ ಗೌಡರ್ ಮಾತನಾಡಿ, ಪುನೀತ್ ಅವರ ಸಮಾಜಮುಖಿ ಸೇವೆ ಅಪಾರವಾಗಿದ್ದು, ಅವರ ಸ್ಪೂರ್ತಿ ಯುವಪೀಳಿಗೆಗೆ ಆದರ್ಶವಾಗಬೇಕು. ಈ ನಿಟ್ಟಿನಲ್ಲಿ ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವ ಮತ್ತು ಸೇವೆ ನೆನಪಿಸಲು ಅವರ ಪುತ್ಥಳಿ ಪ್ರತಿ ಗ್ರಾಮಗಳಲ್ಲೂ ಉದ್ಘಾಟನೆಯಾಗಬೇಕು ಎಂದು ಆಶಿಸಿದರು.
ಚಿಕ್ಕನಹಳ್ಳಿ ಹೊಸ ಬಡಾವಣೆಯ ಬನ್ನಿ ಮಹಾಂಕಾಳಿ ದೇವಸ್ಥಾನ ಹತ್ತಿರದ ವೃತ್ತಕ್ಕೆ ಪುನೀತ್ ರಾಜಕುಮಾರ್ ವೃತ್ತ ಎಂದು ಹೆಸರಿಡಲಾಯಿತು. ಅಲ್ಲದೇ ಪಾಲಿಕೆಯಿಂದ ಆ ಹೆಸರಿನ ನಾಮಫಲಕವೂ ಉದ್ಘಾಟನೆಯಾಯಿತು.
ಪುನೀತ್ ರಾಜಕುಮಾರ್ ಅವರ ಸಾಮಾಜಿಕ ಕಳಕಳಿ ಮತ್ತು ಅವರು ಮಾಡಿದಂ ತಹ ಸಮಾಜ ಸೇವಾ ಕಾರ್ಯಗಳನ್ನು ನೆನಪಿಸಿಕೊಳ್ಳಲಾಯಿತು. ಪುನೀತ್ ರಾಜಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಲಾಯಿತು. ಸುಮಾರು ಸಾವಿರ ಜನರಿಗೆ ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಪಾಲಿಕೆ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಉಮಾ ಪ್ರಕಾಶ್, ಎ.ವೈ. ಪ್ರಕಾಶ್, ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಯು. ರಾಜೇಂದ್ರ, ಕಾರ್ಯದರ್ಶಿ ಮಾರ್ಕಂಡೇಯ, ಉಪಾಧ್ಯಕ್ಷ ಓ.ಜಿ. ಶಿವಕುಮಾರ್, ಖಜಾಂಚಿ ಕೇಶವ, ಸಂಘಟನಾ ಕಾರ್ಯದರ್ಶಿ ನಾಗರಾಜ, ಸದಸ್ಯರುಗಳಾದ ಆನಂದಪ್ಪ, ಮಹಾಲಿಂಗಪ್ಪ, ವೀರೇಶ್, ವಾಸು, ಕೇಶವ್, ಯಲ್ಲಪ್ಪ, ಮಹಮ್ಮದ್ ರಫೀಕ್, ಹನುಮಂತಪ್ಪ, ವಿನಾಯಕ ಸೇರಿದಂತೆ ಅಭಿಮಾನಿಗಳು ಇದ್ದರು.