70 ಕೋಟಿ ರೂ. ವೆಚ್ಚದಲ್ಲಿ ಜವಳಿ ಪಾರ್ಕ್

ರಾಣೇಬೆನ್ನೂರು ತಾ. ತುಮ್ಮಿನಕಟ್ಟೆಯಲ್ಲಿ ಶಾಲಾ ಕೊಠಡಿಗಳ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ್

ರಾಣೇಬೆನ್ನೂರು, ಜ.7- 70 ಕೋಟಿ ರೂ. ವೆಚ್ಚದಲ್ಲಿ ತುಮ್ಮಿನಕಟ್ಟೆ ಸಮೀಪದ ಮಾಳನಾಯ್ಕನಹಳ್ಳಿಯಲ್ಲಿ ಜವಳಿ ಪಾರ್ಕ್ ನಿರ್ಮಿಸಲಾಗುವುದು ಎಂದು ಶಾಸಕ ಅರುಣಕುಮಾರ್ ಪೂಜಾರ ಹೇಳಿದರು.

ತಾಲ್ಲೂಕಿನ ತುಮ್ಮಿನಕಟ್ಟೆಯಲ್ಲಿ ಶಾಲಾ ಕೊಠಡಿಗಳ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಯುವಕರಿಗೆ ಉದ್ಯೋಗ ಸೃಷ್ಟಿಸುವ ಕಳಕಳಿ ಮುಖ್ಯಮಂತ್ರಿಗಳಿಗಿದೆ. ಅದನ್ನು ಗಮನದಲ್ಲಿರಿಸಿಕೊಂಡು ಜವಳಿ ಪಾರ್ಕ್‌ಗೆ ಸಮ್ಮತಿಸಿದ್ದಾರೆ. ಜವಳಿ ಪಾರ್ಕ್ ಮಾಡುವುದರಿಂದ ಪೂರಕ ಕೈಗಾರಿಕೆಗಳು ಆರಂಭವಾಗುತ್ತವೆ. ಅದರಿಂದ ತುಮ್ಮಿನಕಟ್ಟೆ ಸೇರಿದಂತೆ, ನನ್ನ ವಿಧಾನಸಭಾ ಕ್ಷೇತ್ರದ ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಲಿದೆ ಎಂದು ಶಾಸಕರು ಹೇಳಿದರು.

ಈ ವರೆಗಿನ ನನ್ನ ಅವಧಿಯಲ್ಲಿ 55 ಕೊಠಡಿಗಳನ್ನು ನಿರ್ಮಿಸಲಾಗಿದೆ.  ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಕ್ಷಣ  ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ವಿದೇಶದ ಶಾಲೆಗಳಲ್ಲಿ ಕಲಿಯುತ್ತಿದ್ದೇವೆ ಎನ್ನುವ ಅನುಭವ ಇಲ್ಲಿನ ಶಾಲಾ ಮಕ್ಕಳಲ್ಲಿ ಉಂಟಾಗುವಂತೆ ಕೊಠಡಿಗಳನ್ನು ನಿರ್ಮಿಸುವ ಹಂಬಲ ನನ್ನದಿದೆ ಎಂದರು. 

ಕ್ಷೇತ್ರದ 18 ಸಾವಿರ ರೈತರಲ್ಲಿ 13 ಸಾವಿರ ರೈತರಿಗೆ  ಸಹಾಯ ಧನ ನೀಡಲಾಗುತ್ತಿದೆ. ಆ ಹಣ ರೈತರ ಖಾತೆಗಳಿಗೆ ನೇರವಾಗಿ ಬರುತ್ತಿದೆ. ನೇಕಾರರ ಬಗ್ಗೆಯೂ ನಮ್ಮ ಸರ್ಕಾರಕ್ಕೆ ಬಹಳಷ್ಟು ಕಳಕಳಿ ಇದ್ದು, ಅವರ ಕಲ್ಯಾಣಕ್ಕೆ ಪೂರಕ ಚಿಂತನೆ ನಡೆದಿದೆ ಎಂದು ಶಾಸಕರು ಹೇಳಿದರು.  

ವೇದಿಕೆಯಲ್ಲಿ ಗೋಣೆಪ್ಪ ದೀಪಾವಳಿ, ಸಿದ್ದು ಚಿಕ್ಕಬಿದರಿ, ಮಂಗಳಗೌರಿ ಪೂಜಾರ, ಏಕನಾಥ ಭಾನುವಳ್ಳಿ ಇದ್ದರು. ಚೌಡಯ್ಯ ದಾನಾಪುರದ ಶ್ರೀ ಚಿತ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಚೌಡಯ್ಯ ದಾನಾಪುರದಲ್ಲಿ 65 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ  ನಿರ್ಮಿಸಿದ 6 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, ಈ ಗ್ರಾಮದ ಪ್ರೌಢ ಶಾಲೆಗೆ ಈ ವರ್ಷ ಸ್ವಂತ ಕಟ್ಟಡ ಕಟ್ಟಲಾಗುವುದು ಎಂದರು.

ತಾಲ್ಲೂಕಿನ ಕೊನೆಯ ಹಳ್ಳಿಯಾದರೂ ಸಹ ಇಲ್ಲಿ 8 ಕೋಟಿ ರೂ. ವೆಚ್ಚದ ಕಾಮಗಾರಿ ಮಾಡಲಾಗಿದೆ. ಮುಖ್ಯಮಂತ್ರಿಗಳು ನಮ್ಮ ಜಿಲ್ಲೆಯವರಾಗಿದ್ದು, ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ ಎಂದು ಶಾಸಕರು ಹೇಳಿದರು.

ನನ್ನ ಹಾಗೂ ಮುಖ್ಯಮಂತ್ರಿಗಳ ಜೊತೆಗಿನ ಒಡನಾಟದಿಂದಾಗಿ ರಾಜ್ಯದ ಅನೇಕ ಶಾಸಕ ಮಿತ್ರರು ನನಗೆ ಎರಡನೇ ಮುಖ್ಯಮಂತ್ರಿ ಎಂದು ಕರೆಯುತ್ತಾರೆ. ನಮ್ಮಿಬ್ಬರ ನಡುವೆ ಇರುವ  ಸಹೋದ ರತ್ವದ ಭಾವನೆಯನ್ನು ಸದುಪಯೋಗ ಮಾಡಿ ಕೊಂಡು ಜನಪರ ಕೆಲಸಗಳನ್ನು ಮಾಡುತ್ತೇನೆ ಎಂದು ಶಾಸಕ ಅರುಣಕುಮಾರ ಭರವಸೆ ನೀಡಿದರು.

error: Content is protected !!