ಕಾಶಿ ಪೀಠದ ಜಗದ್ಗುರುಗಳ ಅಧ್ಯಕ್ಷತೆಯಲ್ಲಿ 9 ಶಿವಾಚಾರ್ಯ ಸದಸ್ಯರ ಸಮಿತಿ ರಚನೆಗೆ ತೀರ್ಮಾನ
ಹೊನ್ನಾಳಿ, ಜ.6 – ಬುಧವಾರ ಯಾವುದೇ ತೀರ್ಮಾನ ಕೈಗೊಳ್ಳದೇ ಅಪೂರ್ಣಗೊಂಡಿದ್ದ ತಾಲ್ಲೂಕಿನ ರಾಂಪುರ ಹಾಲಸ್ವಾಮಿ ಮಠದ ಉತ್ತರಾಧಿಕಾರಿ ಸಭೆಯನ್ನು ಇಂದು ಕಾಶಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಸಲಾಯಿತು.
ವಿವಿಧ ಮಠಗಳ ಶಿವಾಚಾರ್ಯರು ಹಾಗು ಭಕ್ತರು, ಮಠದ ವಂಶಸ್ಥರ ನೇತೃತ್ವದಲ್ಲಿ ಉತ್ತರಾಧಿಕಾರಿ ಆಯ್ಕೆಯ ಬಗ್ಗೆ ಅನೇಕ ಸಾಧಕ ಬಾಧಕಗಳ ಕುರಿತು ಚರ್ಚೆಯಾಗಿ ಅಂತಿಮವಾಗಿ ಒಂದು ಮಾರ್ಗೋಪಾಯದ ತೀರ್ಮಾನ ಕೈಗೊಂಡು ಮಠದ ವಿವಿಧ ಹಂತದ ಸುಧಾರಣೆ ಕಾಪಾಡಿಕೊಳ್ಳುವ ಬಗ್ಗೆ ಚರ್ಚಿಸಿ ಪಲ್ಲಕ್ಕಿ ಅಜ್ಜಯನ ಅಪ್ಪಣೆಯಂತೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಸಭೆಯಲ್ಲಿ ಚರ್ಚೆಗೊಂಡ ಪ್ರಮುಖ ವಿಷಯಗಳು ಮಠದ ವಂಶಸ್ಥರ ಉತ್ತರಾಧಿಕಾರ, ಯೋಗ್ಯ ಜಾತಕ ಆಧರಿಸಿ ಆಯ್ಕೆ ಇದೇ ಫೆಬ್ರವರಿ ತಿಂಗಳಲ್ಲಿ ಪಟ್ಟಾಧಿಕಾರ, ಹಿಂದಿದ್ದ ಆಡಳಿತ ಅಧಿಕಾರಿಯೇ ತಾತ್ಕಾಲಿಕವಾಗಿ ಮುಂದುವರಿಕೆ, ಮಠದ ಮೇಲ್ವಿಚಾರಣಾ ಸಮಿತಿಗೆ 9 ಶಿವಾಚಾರ್ಯ ಸದಸ್ಯರ ಸಮಿತಿ ರಚನೆ, ಸಭೆಯಲ್ಲಿ ಮಠಗಳಿಗೆ ಒಂದು ಮೇಲ್ವಿಚಾರಣಾ ಸಮಿತಿ ಸಹ ಮಾಡಲು ಭಕ್ತರು ಸಮ್ಮತಿಸಿದ್ದು, ಈ ಸಮಿತಿಗೆ ಕಾಶಿಪೀಠದ ಜಗದ್ಗುರು ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷರಾಗಬೇಕು, ಹೊಟ್ಯಾಪುರ ಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹೊನ್ನಾಳಿ ಹಿರೇಕಲ್ಮಠದ ಶ್ರೀ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಬುಕ್ಕಸಾಗರದ ಶ್ರೀ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಹಡಗಲಿಯ ಶ್ರೀ ಹಾಲುವೀರಪ್ಪಜ್ಜ ಸ್ವಾಮೀಜಿ ಒಳಗೊಂಡಂತೆ ರಾಂಪುರ, ಬಸವಾಪಟ್ಟಣ, ಗುಂಡೇರಿ ಗ್ರಾಮದ ತಲಾ ಒಬ್ಬ ಗ್ರಾಮಸ್ಥರನ್ನೊಳಗೊಂಡ 9 ಜನರ ಕಮಿಟಿ ಇದಾಗಿರಬೇಕು. ಸದ್ಯದಲ್ಲಿಯೇ ಈ ಕಮಿಟಿ ರಚನೆಯಾಗಬೇಕು ಎಂದು ತೀರ್ಮಾನಿಸಲಾಗಿದೆ.