ಹರಿಹರ : ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್‌ಗೆ ಚಾಲನೆ ನೀಡಿದ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್
ಹರಿಹರ, ಜ. 6- ಕ್ರೀಡಾಪಟುಗಳು ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ, ಸೋಲು ಮತ್ತು ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣಗಳನ್ನು ಹೊಂದಬೇಕು ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹೇಳಿದ್ದಾರೆ.
ನಗರದ ಗಾಂಧಿ ಮೈದಾನದಲ್ಲಿ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಹುಟ್ಟು ಹಬ್ಬದ ನಿಮಿತ್ಯ ನಡೆಯುತ್ತಿರುವ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟ್ ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮೊಬೈಲ್ ಹಾವಳಿ ಹೆಚ್ಚಾಗಿ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುವುದು ಕಡಿಮೆಯಾಗಿದೆ. ಜೊತೆಗೆ ಈ ಕೊರೊನಾ ರೋಗವು ಸಹ ಬಂದಾಗಿನಿಂದ ಇನ್ನಷ್ಟು ಕ್ರೀಡೆಗಳು ನಡೆಯುವುದು ಸಹ ಅಷ್ಟಕಷ್ಟೇ ಆಗಿವೆ ಎಂದವರು ಹೇಳಿದರು.
ಹಿಂದಿನ ಕಾಲದಲ್ಲಿ ಮನೆಗೊಬ್ಬರು ಕ್ರೀಡಾಪಟು ಗಳು ಸಿಗುತ್ತಿದ್ದರು. ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ವಿಶಿಷ್ಟ ಸಾಧನೆಯನ್ನು ಮಾಡಿದರು. ಕಾಲ ಬದಲಾವಣೆ ಆದಂತೆ ಬಡಾವಣೆಗೆ ಒಬ್ಬರು ಕ್ರೀಡಾಪಟುಗಳು ಸಿಗುವುದು ಕಷ್ಟವಾಗಿದೆ. ಹಾಗಾಗಿ ಸರ್ಕಾರ ಕ್ರೀಡೆಗಳು ನಶಿಸಿ ಹೋಗುವುದಕ್ಕಿಂತ ಮುಂಚಿತವಾಗಿ ಕ್ರೀಡೆಗಳು ನಿರಂತರವಾಗಿ ನಡೆಯುವುದಕ್ಕೆ ಪ್ರೋತ್ಸಾಹ ನೀಡುವುದಕ್ಕೆ ಮುಂದಾಗಬೇಕು ಎಂದು ಶಿವಶಂಕರ್ ತಿಳಿಸಿದರು.
ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯ ಸುಧಾರಣೆಗೆ ತರಬಹುದು. ಆರೋಗ್ಯ ಚೆನ್ನಾಗಿದ್ದರೆ ಮಾತ್ರ ರೀತಿಯ ಸಾಧನೆ ಮಾಡಬಹುದಾಗಿದೆ. ಇದರಿಂದ ಸಾರ್ವಜನಿಕರು ಹೆಚ್ಚು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ರತ್ನ ಡಿ. ಉಜ್ಜೇಶ್, ಸದಸ್ಯರಾದ ಅಲ್ತಾಫ್, ಮುಖಂಡರಾದ ಅಂಗಡಿ ಮಂಜುನಾಥ್, ಅಮರಾವತಿ ನಾಗರಾಜ್, ಲತಾ ಕೊಟ್ರೇಶ್, ಹೆಚ್ ಸುಧಾಕರ್, ಕುಮಾರ್, ಮಹೇಶ್, ವಸಂತ್ ಕುಮಾರ್ ಉಪಸ್ಥಿತರಿದ್ದರು.